ಬ್ರಾಹ್ಮಣರನ್ನು ಬ್ರಾಹ್ಮಣರೆಂದಾಗ ಬೇಸರವಾಗುವುದಿಲ್ಲ, ಶೂದ್ರರಿಗೇಕೆ ಶೂದ್ರರೆಂದಾಗ ಬೇಸರ?: ಪ್ರಜ್ಞಾ ಠಾಕೂರ್
ಭೋಪಾಲ್: ಸಾಮಾಜಿಕ ವ್ಯವಸ್ಥೆಯ ಕುರಿತಾದ ‘ಅಜ್ಞಾನ’ದಿಂದಾಗಿ ಶೂದ್ರರನ್ನು ಶೂದ್ರ ಎಂದು ಕರೆದಾಗ ಅವರಿಗೆ ಬೇಸರವಾಗುತ್ತದೆ ಎಂದು ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಬಿಜೆಪಿಯ ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.
ಮಧ್ಯಪ್ರದೇಶದ ಸೇಹೋರ್ ನಲ್ಲಿ ಶನಿವಾರ ಕ್ಷತ್ರಿಯ ಮಹಾಸಭಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. “ನಮ್ಮ `ಧರ್ಮಶಾಸ್ತ್ರ’ಗಳಲ್ಲಿ ಸಮಾಜವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಕ್ಷತ್ರಿಯರೊಬ್ಬರನ್ನು ಕ್ಷತ್ರಿಯ ಎಂದು ಕರೆದರೆ ಅವರಿಗೆ ಬೇಸರವಾಗುವುದಿಲ್ಲ, ಬ್ರಾಹ್ಮಣರನ್ನು ಬ್ರಾಹ್ಮಣ ಎಂದು ಕರೆದರೆ ಅವರಿಗೆ ಬೇಸರವಾಗುವುದಿಲ್ಲ, ವೈಶ್ಯರನ್ನು ವೈಶ್ಯ ಎಂದು ಕರೆದರೆ ಅವರಿಗೆ ಬೇಸರವಾಗುವುದಿಲ್ಲ, ಆದರೆ ನೀವು ಶೂದ್ರರೊಬ್ಬರನ್ನು ಶೂದ್ರ ಎಂದು ಕರೆದರೆ ಅವರಿಗೆ ಬೇಸರವಾಗುತ್ತದೆ. ಇದೇಕೆ ಹೀಗೆ? ಅವರಲ್ಲಿರುವ ಅಜ್ಞಾನದಿಂದಾಗಿ ಅವರಿಗೆ ಅರ್ಥವಾಗುವುದಿಲ್ಲ,'' ಎಂದು ಪ್ರಜ್ಞಾ ಹೇಳಿದ್ದಾರೆ.
“ಜನಸಂಖ್ಯಾ ನಿಯಂತ್ರಣ ಕಾನೂನನ್ನು ದೇಶವಿರೋಧಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರಿಗೆ ಅನ್ವಯಿಸಬೇಕು, ದೇಶಕ್ಕಾಗಿ ಬಾಳುವವರಿಗೆ ಅದು ಅನ್ವಯವಾಗುವುದಿಲ್ಲ,” ಎಂದು ಪ್ರಜ್ಞಾ ಠಾಕೂರ್ ಹೇಳಿದರು.
“ಮೀಸಲಾತಿಯನ್ನು ಜಾತಿ ಆಧಾರದ ಬದಲು ಆರ್ಥಿಕ ಮಾನದಂಡದ ಮೇಲೆ ನೀಡಬೇಕು ಹಾಗೂ ಇದರಿಂದ ಬಡವರಿಗೆ ಲಾಭವಾಗಿ ಅವರು ಉತ್ತಮವಾಗಿ ಬಾಳುವಂತಾಗಬೇಕು,'' ಎಂದು ಹೇಳಿದ ಅವರು ಸಭಿಕರಲ್ಲಿದ್ದ ಮಹಿಳೆಯರನ್ನುದ್ದೇಶಿಸಿ ``ಇಂದು ಕ್ಷತ್ರಿಯರು ತಮ್ಮ ಕರ್ತವ್ಯಗಳನ್ನು ಅರಿತು ಹೆಚ್ಚು ಹೆಚ್ಚು ಮಕ್ಕಳನ್ನು ಹೆತ್ತು ಅವರನ್ನು ಮುಂದೆ ಸೇನೆಗೆ ಸೇರಿಸಬೇಕು ಹಾಗೂ ಈ ಮೂಲಕ ಅವರು ದೇಶಕ್ಕಾಗಿ ಹೋರಾಡುವಂತೆ ಮಾಡಬೇಕು,'' ಎಂದರು.
ರೈತರ ಪ್ರತಿಭಟನೆಗಳನ್ನು ಉಲ್ಲೇಖಿಸಿದ ಅವರು “ರೈತರ ಹೆಸರಿನಲ್ಲಿ ಪ್ರತಿಭಟಿಸುವವರು ದೇಶ ವಿರೋಧಿಗಳು. ಅವರು ರೈತರಲ್ಲ ಬದಲು ರೈತರ ವೇಷದಲ್ಲಿರುವ ಕಾಂಗ್ರೆಸ್ಸಿಗರು ಹಾಗೂ ಎಡಪಂಥೀಯರು, ಅವರು ದೇಶದ ವಿರುದ್ಧ ದನಿಯೆತ್ತಿ ಶಾಹೀನ್ ಬಾಗ್ ಪ್ರತಿಭಟನೆ ವೇಳೆ ಮಾಡಿದಂತೆ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ,''ಎಂದರು.
ಸಂಸದೆ ಕ್ಷತ್ರಿಯ ಮಹಾಸಭಾದ ಸ್ಥಾಪನಾ ದಿನದ ಕಾರ್ಯಕ್ರಮಕ್ಕೆ ದೊರೆತ ಆಹ್ವಾನದ ಮೇರೆಗೆ ಹೋಗಿದ್ದರು ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ,. ಆದರೆ ತಮ್ಮ ಸಂಘಟನೆ ಈ ಕಾರ್ಯಕ್ರಮ ಆಯೋಜಿಸಿಲ್ಲ ಎಂದು ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾದ ಕಾರ್ಯಾಧ್ಯಕ್ಷ ಸುರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.