ಕೃಷಿ ವಲಯಕ್ಕೆ ಹಾನಿಕಾರಕ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ: ರಾಜನಾಥ್ ಸಿಂಗ್
ಹೊಸದಿಲ್ಲಿ:ರಾಷ್ಟ್ರ ರಾಜಧಾನಿಯ ಹೊರವಲಯದಲ್ಲಿ ಸಾವಿರಾರು ರೈತರು ತೀವ್ರ ಪ್ರತಿಭಟನೆ ಮುಂದುವರಿಸಿರುವಂತೆಯೇ ಸೋಮವಾರ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೃಷಿ ಕಾನೂನುಗಳ ವಿರುದ್ಧ ಮುಕ್ತ ಚರ್ಚೆಗೆ ಕೇಂದ್ರ ಸರಕಾರವು ಸದಾ ಸಿದ್ಧವಿದೆ. ಕೃಷಿ ವಲಯದಲ್ಲಿ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ರೈತರು ರದ್ದುಪಡಿಸಲು ಆಗ್ರಹಿಸುತ್ತಿರುವ ಕೃಷಿ ಕಾನೂನುಗಳನ್ನು ರೈತರ ಹಿತದೃಷ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಜಾರಿಗೊಳಿಸಲಾಗಿದೆ ಎಂದರು.
ಎಫ್‌ಐಸಿಸಿಐನ 93ನೇ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ಕೊರೋನದಿಂದ ಉಂಟಾಗಿರುವ ಪ್ರತಿಕೂಲ ಪರಿಣಾಮದಿಂದ ಪಾರಾಗಿರುವ ವಲಯಗಳ ಪೈಕಿ ಕೃಷಿ ಕ್ಷೇತ್ರವೂ ಒಂದಾಗಿದೆ. ನಮ್ಮ ಉತ್ಪನ್ನ ಹಾಗೂ ದಾಸ್ತಾನು ಹೇರಳವಾಗಿದೆ ಹಾಗೂ ನಮ್ಮ ಗೋದಾಮುಗಳು ತುಂಬಿವೆ ಎಂದರು.
ನಮ್ಮ ಕೃಷಿ ಕ್ಷೇತ್ರದ ಹಿಂದಡಿ ಇಡುವ ಕ್ರಮಗಳನ್ನು ಕೈಗೊಳ್ಳುವ ಪ್ರಶ್ನೆಯೇ ಇಲ್ಲ. ನಾವು ಯಾವಾಗಲೂ ನಮ್ಮ ರೈತ ಸಹೋದರರ ಸಮಸ್ಯೆಯನ್ನು ಆಲಿಸಲು, ಅವರ ಅನುಮಾನವನ್ನು ಸರಿಗಪಡಿಸಲು ಹಾಗೂ ನಾವು ನೀಡಬಹುದಾದ ಆಶ್ವಾಸನೆಗಳನ್ನು ಅವರಿಗೆ ನೀಡಲು ಸಿದ್ಧರಿದ್ದೇವೆ. ನಮ್ಮ ಸರಕಾರ ಯಾವಾಗಲೂ ಚರ್ಚೆ ಹಾಗೂ ಸಂವಾದಕ್ಕೆ ಮುಕ್ತವಾಗಿದೆ ಎಂದು ಆಡಳಿತಾರೂಢ ಬಿಜೆಪಿಯಲ್ಲಿ ರೈತ ಪರ ನಾಯಕ ಎಂದು ಪರಿಣಿಸಲ್ಪಟ್ಟಿರುವ ಸಿಂಗ್ ಹೇಳಿದ್ದಾರೆ.