ಸ್ನೇಹಿತನಿಗೆ ಅಮಲು ಪದಾರ್ಥ ನೀಡಿ ಆತನ ಪತ್ನಿಯ ಅತ್ಯಾಚಾರಗೈದ ಸೇನಾ ಕರ್ನಲ್: ಆರೋಪ
ಕಾನ್ಪುರ, ಡಿ. 14: ಇಲ್ಲಿ ನಿಯೋಜಿಸಲಾದ ಸೇನಾ ಕರ್ನಲ್ ಓರ್ವ ಅಧಿಕಾರಿಗಳ ಉಪಹಾರಗೃಹದಲ್ಲಿ ತನ್ನ ಗೆಳೆಯನ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಸೇನಾಧಿಕಾರಿ ವಿರುದ್ಧ ಸಂತ್ರಸ್ತೆಯ ಪತಿ ಇಲ್ಲಿನ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ (ಪೂರ್ವ) ರಾಜ್ ಕುಮಾರ್ ಅಗರ್ವಾಲ್ ಹೇಳಿದ್ದಾರೆ.
ತಾನು ಹಾಗೂ ರಶ್ಯಾ ಮೂಲದ ತನ್ನ ಪತ್ನಿ ಕಳೆದ 10 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದೆವು. ಕರ್ನಲ್ ತನಗೆ ಮತ್ತು ಬರಿಸುವ ಔಷಧ ನೀಡಿ ತನ್ನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ಪತಿ ದೂರಿನಲ್ಲಿ ಆರೋಪಿಸಿದ್ದಾರೆ.
‘‘ಲೆಫ್ಟಿನೆಂಟ್ ಕರ್ನಲ್‌ನಿಂದ ಕರ್ನಲ್ ಸ್ಥಾನಕ್ಕೆ ಭಡ್ತಿ ಹೊಂದಿದ ಸಂಭ್ರಮಾಚರಣೆಗೆ ತನ್ನನ್ನು ಹಾಗೂ ತನ್ನ ಪತ್ನಿಯನ್ನು ಕರ್ನಲ್ ಶನಿವಾರ ಆಹ್ವಾನಿಸಿದ್ದರು ಎಂದು ಸಂತ್ರಸ್ತೆಯ ಪತಿ ಎಫ್‌ಐಆರ್‌ನಲ್ಲಿ ಹೇಳಿದ್ದಾರೆ’’ ಎಂದು ಅಗರ್ವಾಲ್ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಲಾಗಿದೆ. ಆರೋಪಿಯನ್ನು ಬಂಧಿಸಲು ತಂಡವೊಂದನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.