ಕೋವಿಡ್-19 ಲಸಿಕೆ ವಿತರಣೆಗೆ ಕೇಂದ್ರದ ಮಾರ್ಗಸೂಚಿ ಪ್ರಕಟ
ಹೊಸದಿಲ್ಲಿ,ಡಿ.14: ಪ್ರತಿ ದಿನ ಒಂದು ಅವಧಿಯಲ್ಲಿ 100ರಿಂದ 200 ಜನರಿಗೆ ಲಸಿಕೆ ನೀಡಿಕೆ,ಫಲಾನುಭವಿಗಳು ಲಸಿಕೆ ಪಡೆದ ಬಳಿಕ 30 ನಿಮಿಷಗಳ ಕಾಲ ಅವರ ಮೇಲೆ ನಿಗಾ ಮತ್ತು ಲಸಿಕೆ ನೀಡುವ ಕೋಣೆಗೆ ಓರ್ವ ಫಲಾನುಭವಿಗೆ ಮಾತ್ರ ಪ್ರವೇಶಾವಕಾಶ ಇವು ಕೇಂದ್ರ ಸರಕಾರವು ಕೋವಿಡ್-19 ಲಸಿಕೆ ವಿತರಣೆ ಅಭಿಯಾನಕ್ಕಾಗಿ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಸೇರಿವೆ.
ರಾಜ್ಯಗಳಿಗೆ ಇತ್ತೀಚಿಗೆ ಹೊರಡಿಸಿರುವ ಮಾರ್ಗಸೂಚಿಯಂತೆ ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡಿರುವ ಫಲಾನುಭವಿಗಳು ಮತ್ತು ಕೊರೋನ ವೈರಸ್ ಲಸಿಕೆಗಳ ಜಾಡನ್ನು ರಿಯಲ್ ಟೈಮ್ ಆಧಾರದಲ್ಲಿ ಕಂಡುಕೊಳ್ಳಲು ಕೋವಿಡ್ ವ್ಯಾಕ್ಸಿನ್ ಇಂಟಲಿಜೆನ್ಸ್ ನೆಟ್‌ವರ್ಕ್ ಸಿಸ್ಟಮ್ (ಕೋ-ವಿನ್) ಎಂಬ ಡಿಜಿಟಲ್ ವೇದಿಕೆಯನ್ನು ಬಳಸಲಾಗುವುದು. ಲಸಿಕೆ ಕೇಂದ್ರಗಳಲ್ಲಿ ಪೂರ್ವಭಾವಿಯಾಗಿ ನೋಂದಾಯಿಸಿಕೊಂಡಿರುವ ಫಲಾನುಭವಿಗಳಿಗೆ ಮಾತ್ರ ಆದ್ಯತೆಯ ಮೇರೆಗೆ ಲಸಿಕೆಯನ್ನು ನೀಡಲಾಗುವುದು, ಸ್ಥಳದಲ್ಲಿ ನೋಂದಾವಣೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ.
ಲಸಿಕೆ ವಿತರಣೆ ವೇಳೆ ವಿವಿಧ ತಯಾರಿಕೆಗಳ ಕೋವಿಡ್-19 ಲಸಿಕೆಗಳು ಮಿಶ್ರಗೊಳ್ಳುವುದನ್ನು ತಡೆಯಲು ಸಾಧ್ಯವಾದಷ್ಟು ಮಟ್ಟಿಗೆ ಒಂದು ಜಿಲ್ಲೆಗೆ ಒಂದೇ ಕಂಪನಿಯ ಲಸಿಕೆಗಳನ್ನು ಹಂಚಿಕೆ ಮಾಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ.
ಲಸಿಕೆ ವಾಹಕ ಪೆಟ್ಟಿಗೆಗಳು,ಲಸಿಕೆಗಳಿರುವ ಕಿರುಶೀಷೆಗಳು ಮತ್ತು ಮಂಜುಗಡ್ಡೆಯ ಪ್ಯಾಕ್‌ಗಳ ಮೇಲೆ ನೇರವಾಗಿ ಸೂರ್ಯನ ಬಿಸಿಲು ಬೀಳದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಲಸಿಕೆ ಮತ್ತು ಅದನ್ನು ತೆಳ್ಳಗಾಗಿಸುವ ದ್ರಾವಣಗಳನ್ನು ಗಾಳಿಯಾಡದಂತೆ ಮುಚ್ಚಳ ಹಾಕಿ ಫಲಾನುಭವಿಯು ಕೊಠಡಿಯೊಳಗೆ ಪ್ರವೇಶಿಸುವವರೆಗೆ ಲಸಿಕೆ ವಾಹಕ ಪೆಟ್ಟಿಗೆಯಲ್ಲಿಯೇ ಇರಿಸಬೇಕು. ಕೋವಿಡ್-19 ಲಸಿಕೆಯ ಶೀಷೆಯ ಮೇಲೆ ವ್ಯಾಕ್ಸಿನ್ ವಯಲ್ ಮಾನಿಟರ್(ವಿವಿಎಂ)ಗಳು ಮತ್ತು ಮುಕ್ತಾಯ ದಿನಾಂಕ ಇಲ್ಲದಿರಬಹುದು. ಆದರೆ ಇದಕ್ಕಾಗಿ ಲಸಿಕೆ ನೀಡುವ ಸಿಬ್ಬಂದಿಗಳು ಕಳವಳಗೊಳ್ಳಬೇಕಿಲ್ಲ. ದಿನದ ಲಸಿಕೆ ನೀಡಿಕೆ ಅವಧಿಯ ಬಳಿಕ ಮಂಜುಗಡ್ಡೆ ಪ್ಯಾಕ್ ಸಹಿತ ಲಸಿಕೆ ವಾಹಕ ಪೆಟ್ಟಿಗೆ ಮತ್ತು ಬಳಸಿರದ ಲಸಿಕೆ ಶೀಷೆಗಳನ್ನು ವಿತರಣಾ ಶೈತ್ಯಾಗಾರಕ್ಕೆ ಮರಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಲಸಿಕೆ ನೀಡಿಕೆ ತಂಡವು ಐವರು ಸದಸ್ಯರನ್ನು ಹೊಂದಿರುತ್ತದೆ. ಪ್ರತಿ ಸೆಷನ್ ಅಥವಾ ಅವಧಿಯನ್ನು ದಿನಕ್ಕೆ 100 ಫಲಾನುಭವಿಗಳಿಗಾಗಿ ಯೋಜಿಸಬೇಕು. ಲಸಿಕೆ ನೀಡಿಕೆ ಕೇಂದ್ರದಲ್ಲಿ ಸಾಕಷ್ಟು ಅನುಕೂಲತೆಗಳು ಮತ್ತು ಫಲಾನುಭವಿಗಳು ಕಾಯಲು ಮತ್ತು ಅವರನ್ನು ನಿರೀಕ್ಷಣೆಯಲ್ಲಿಡಲು ಹೆಚ್ಚುವರಿ ಕೊಠಡಿಗಳಿದ್ದರೆ ತಂಡದಲ್ಲಿ ಇನ್ನೋರ್ವ ಲಸಿಕೆ ಅಧಿಕಾರಿಯನ್ನು ಸೇರಿಸಿಕೊಂಡು 200 ಫಲಾನುಭವಿಗಳಿಗೆ ಲಸಿಕೆಯನ್ನು ನೀಡಬಹುದಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು,ಮುಂಚೂಣಿಯ ಕೊರೋನ ಕಾರ್ಯಕರ್ತರು ಮತ್ತು 50 ವರ್ಷಕ್ಕೆ ಮೇಲ್ಪಟ್ಟ ಪ್ರಾಯದವರಿಗೆ ಲಸಿಕೆಯನ್ನು ನೀಡಲಾಗುವುದು. ಎರಡನೇ ಹಂತದಲ್ಲಿ ಇತರ ಅನಾರೋಗ್ಯಗಳನ್ನು ಹೊಂದಿರುವ 50 ವರ್ಷಕ್ಕೂ ಕೆಳಗಿನ ಪ್ರಾಯದವರಿಗೆ ಮತ್ತು ಅಂತಿಮ ಹಂತದಲ್ಲಿ ಸಾಂಕ್ರಾಮಿಕದ ಸ್ವರೂಪ ಮತ್ತು ಲಸಿಕೆಯ ಲಭ್ಯತೆಯನ್ನು ಆಧರಿಸಿ ಉಳಿದವರಿಗೆ ಲಸಿಕೆ ನೀಡಲಾಗುವುದು. ಕಾರ್ಯಾಚರಣೆಯ ಅನುಕೂಲಕ್ಕಾಗಿ 50 ವರ್ಷಕ್ಕೂ ಹೆಚ್ಚಿನ ವಯೋಮಾನದ ಗುಂಪನ್ನು 60 ವರ್ಷಕ್ಕಿಂತ ಮೇಲಿನವರು ಮತ್ತು 50ರಿಂದ 60 ವರ್ಷ ವಯೋಮಾನದವರು ಎಂದು ವಿಭಜಿಸಬಹುದಾಗಿದೆ. 50 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರನ್ನು ಗುರುತಿಸಲು ಇತ್ತೀಚಿನ ಮತದಾರರ ಪಟ್ಟಿಗಳನ್ನು ಬಳಸಿಕೊಳ್ಳಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಮೊದಲ ಹಂತದಲ್ಲಿ ಸುಮಾರು 30 ಕೋಟಿ.ಜನರಿಗೆ ಲಸಿಕೆ ನೀಡಲು ಸರಕಾರವು ಉದ್ದೇಶಿಸಿದೆ.
ಫಲಾನುಭವಿಗಳು ಕೋ-ವಿನ್ ವೆಬ್‌ಸೈಟ್‌ನಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಮತದಾರರ ಗುರುತಿನ ಚೀಟಿ,ಆಧಾರ್ ಕಾರ್ಡ್,ವಾಹನ ಚಾಲನೆ ಪರವಾನಿಗೆ,ಪಾಸ್‌ಪೋರ್ಟ್ ಅಥವಾ ಪಿಂಚಣಿ ದಾಖಲೆಯಂತಹ 12 ಭಾವಚಿತ್ರ ಸಹಿತ ದಾಖಲೆಗಳ ಪೈಕಿ ಯಾವುದನ್ನೂ ಸಲ್ಲಿಸಬಹುದಾಗಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.