1975ರ ತುರ್ತುಪರಿಸ್ಥಿತಿಯನ್ನು ‘ಅಸಾಂವಿಧಾನಿಕವೆಂದು ಘೋಷಿಸಿ’ ಎಂಬ ಅಪೀಲನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್

Update: 2020-12-14 15:44 GMT

 ಹೊಸದಿಲ್ಲಿ,ಡಿ.14:  ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಾವು ಅಧಿಕಾರದಲ್ಲಿದ್ದಾಗ 1975ರಲ್ಲಿ ದೇಶದಲ್ಲಿ ಹೇರಿದ್ದ ತುರ್ತುಪರಿಸ್ಥಿತಿಯನ್ನು “ಸಂಪೂರ್ಣವಾಗಿ ಅಸಾಂವಿಧಾನಿಕ'' ಎಂದು ತೀರ್ಮಾನಿಸುವಂತೆ ನೀಡಿದ್ದ ಅಪೀಲನ್ನು ಸುಪ್ರೀಮ್ ಕೋರ್ಟ್ ಬುಧವಾರ ಪರಿಗಣಿಸಲಿದೆ. 94 ವರ್ಷದ ಮಹಿಳೆಯೊಬ್ಬರು ಸಲ್ಲಿಸಿರುವ ಅಪೀಲಿನ ಕುರಿತಾದಂತೆ ಕೇಂದ್ರ ಸರಕಾರದಿಂದ ಉನ್ನತ ನ್ಯಾಯಾಲಯ ಪ್ರತಿಕ್ರಿಯೆ ಕೋರಿದೆ.

ತುರ್ತುಪರಿಸ್ಥಿತಿ ಹೇರಿ 45 ವರ್ಷಗಳಾದ ನಂತರ ಅದರ ಸಿಂಧುತ್ವದ ಕುರಿತು ನಿರ್ಧರಿಸುವುದು ಸಾಧ್ಯವೇ ಅಥವಾ ಅಗತ್ಯವೇ ಎಂಬುದನ್ನು ಜಸ್ಟಿಸ್ ಸಂಜಯ್ ಕಿಶನ್ ಕೌಲ್ ಅವರ ನೇತೃತ್ವದ ಪೀಠ ಪರಿಶೀಲಿಸಲಿದೆ.

ತುರ್ತುಪರಿಸ್ಥಿತಿಯನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕೆಂದು ಕೋರಿರುವ ಅಪೀಲುದಾರೆ ವೀಣಾ ಸರೀನ್, ತುರ್ತುಪರಿಸ್ಥಿತಿಯಿಂದಾಗಿ ತಾವು ಮತ್ತು ತಮ್ಮ ಪತಿ ದೇಶ ಬಿಟ್ಟು ತೆರಳುವಂತಾಗಿತ್ತು ಹಾಗೂ ತಮ್ಮ ಆಸ್ತಿ-ಪಾಸ್ತಿ ಸಂಪೂರ್ಣ ನಷ್ಟಗೊಂಡಿತ್ತು ಎಂದು ತಮ್ಮ ಅಪೀಲಿನಲ್ಲಿ ಹೇಳಿದ್ದಾರೆ. ಆ ಸಂದರ್ಭ ತಾವು ಯಶಸ್ವೀ ಗೋಲ್ಡ್ ಆರ್ಟ್ ಉದ್ಯಮದಲ್ಲಿದ್ದುದಾಗಿ ಹಾಗೂ ಯಾವುದೇ ಕಾರಣವಿಲ್ಲದೆ ಜೈಲಿಗೆ ತಳ್ಳುವ ಭಯದಿಂದ ದೇಶ ಬಿಟ್ಟು ತೆರಳುವಂತಾಗಿತ್ತು. ತಮ್ಮ ಎಲ್ಲಾ ಆಸ್ತಿ ವಶಪಡಿಸಿಕೊಂಡಿದ್ದರಿಂದ ಒತ್ತಡಕ್ಕೊಳಗಾಗಿ ಪತಿ ನಂತರ ತೀರಿಕೊಂಡರು, ಸಂಬಂಧಿಕರು ಹಾಗೂ ಸ್ನೇಹಿತರೂ ತಮ್ಮನ್ನು ದೂರಗೊಳಿಸಿದ್ದರು ಎಂದು ಅವರ ಅಪೀಲಿನಲ್ಲಿ ಹೇಳಲಾಗಿದೆ.

ಅಪೀಲುದಾರೆಯನ್ನು ಹಿರಿಯ ವಕೀಲ ಹರೀಶ್ ಸಾಳ್ವೆ ಪ್ರತಿನಿಧಿಸುತ್ತಿದ್ದಾರೆ.

ಆರಂಭದಲ್ಲಿ ಈ ಅಪೀಲನ್ನು ಕೈಗೆತ್ತಿಕೊಳ್ಳಲು ನ್ಯಾಯಾಲಯ ನಿರಾಕರಿಸಿದ್ದರೂ, ಹಲವಾರು ವರ್ಷಗಳ ನಂತರವೂ ಯುದ್ಧಾಪರಾಧ ಪ್ರಕರಣಗಳ ವಿಚಾರಣೆಯನ್ನು ನಡೆಸಲಾಗುತ್ತದೆ ಎಂದು ಸಾಳ್ವೆ ಹೇಳಿದರಲ್ಲದೆ ಪ್ರಜಾಪ್ರಭುತ್ವದ ಹಕ್ಕುಗಳನ್ನು 19 ತಿಂಗಳ ಕಾಲ ತಡೆಹಿಡಿದದ್ದು ಸಂವಿಧಾನದ ಮೇಲಿನ ದೊಡ್ಡ ದಾಳಿ ಎಂದು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News