ರೈತರ ಪ್ರತಿಭಟನೆ: ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶಗಳ ಆರ್ಥಿಕತೆಗೆ ಪ್ರತಿನಿತ್ಯ ಭಾರೀ ನಷ್ಟ
ಹೊಸದಿಲ್ಲಿ,ಡಿ.15: ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಪಂಜಾಬ್, ಹರ್ಯಾಣ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಪ್ರದೇಶದ ಅಂತರ್‌ಸಂಬಂಧಿತ ಆರ್ಥಿಕತೆಗಳಿಗೆ ತೀವ್ರ ಹೊಡೆತವನ್ನು ನೀಡುತ್ತಿದೆ ಎಂದು ಉದ್ಯಮ ಒಕ್ಕೂಟ ಅಸೋಚಾಮ್ ಮಂಗಳವಾರ ಹೇಳಿದೆ.
ಪ್ರತಿಭಟನೆಯಿಂದಾಗಿ ಪೂರೈಕೆ ಸರಪಳಿ ಮತ್ತು ಸಾಗಾಣಿಕೆಗೆ ವ್ಯತ್ಯಯವುಂಟಾಗಿದೆ ಮತ್ತು ಇದು ಪ್ರದೇಶದ ಆರ್ಥಿಕತೆಗಳಿಗೆ ಪ್ರತಿದಿನ 3,000 ಕೋ.ರೂ.ಗಳಿಂದ 3,500 ಕೋ.ರೂ.ಗಳಷ್ಟು ನಷ್ಟವನ್ನುಂಟು ಮಾಡುತ್ತಿದೆ ಎಂದು ಅದು ಅಂದಾಜಿಸಿದೆ.
ಅದಾಗಲೇ ಮುರಿದುಬಿದ್ದಿದ್ದ ಪೂರೈಕೆ ಸರಪಳಿಯು ಕೋವಿಡ್ ಲಾಕ್‌ಡೌನ್ ಬಳಿಕ ಚೇತರಿಸಿಕೊಳ್ಳುತ್ತಿತ್ತು,ಆದರೆ ಅದೀಗ ಪ್ರತಿಭಟನೆಯಿಂದಾಗಿ ತೀವ್ರ ಒತ್ತಡಕ್ಕೆ ಸಿಲುಕಿದೆ ಎಂದು ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿರುವ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ),ಸುಮಾರು ಮೂರನೇ ಎರಡರಷ್ಟು ಸರಕು ಸಾಗಾಣಿಕೆ ವಾಹನಗಳು ಪಂಜಾಬ್, ಹರ್ಯಾಣ, ರಾಜಸ್ಥಾನ ಮತ್ತು ದಿಲ್ಲಿ-ಎನ್‌ಸಿಆರ್‌ಗಳಲ್ಲಿಯ ತಮ್ಮ ಗಮ್ಯಗಳನ್ನು ತಲುಪಲು ಶೇ.50ರಷ್ಟು ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳುತ್ತಿವೆ. ಜೊತೆಗೆ ಹರ್ಯಾಣ,ಉತ್ತರಾಖಂಡ ಮತ್ತು ಪಂಜಾಬಿನ ಗೋದಾಮುಗಳಿಂದ ಸರಕು ಸಾಗಣೆ ವಾಹನಗಳು ದಿಲ್ಲಿಯನ್ನು ತಲುಪಲು ಶೇ.50ರಷ್ಟು ಹೆಚ್ಚುವರಿ ದೂರವನ್ನು ಕ್ರಮಿಸುವ ಅನಿವಾರ್ಯತೆಗೊಳಗಾಗಿವೆ ಎಂದಿದೆ. ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರಗಳ ಸಂಯೋಜಿತ ಆರ್ಥಿಕತೆಯು ಸುಮಾರು 18 ಲ.ಕೋ.ರೂ.ಗಳ ಗಾತ್ರದ್ದಾಗಿದೆ. ರೈತರ ಪ್ರತಿಭಟನೆ ಹಾಗೂ ರಸ್ತೆ ತಡೆಗಳು,ಟೋಲ್‌ಪ್ಲಾಝಾಗಳು ಮತ್ತು ರೈಲುಗಳ ಸ್ಥಗಿತದಿಂದಾಗಿ ಆರ್ಥಿಕ ಚಟುವಟಿಕೆಗಳು ನಿಂತುಹೋಗಿವೆ. ತಮ್ಮ ಉತ್ಪನ್ನಗಳನ್ನು ಗಣನೀಯ ಪ್ರಮಾಣದಲ್ಲಿ ರಫ್ತು ಮಾಡುತ್ತಿರುವ ಜವಳಿ,ವಾಹನ ಬಿಡಿಭಾಗಗಳು, ಬೈಸಿಕಲ್‌ಗಳು ಮತ್ತು ಕ್ರೀಡಾ ಸಾಮಗ್ರಿಗಳ ಕೈಗಾರಿಕೆಗಳಿಗೆ ಕ್ರಿಸ್‌ಮಸ್‌ಗೆ ಮುನ್ನ ವಿದೇಶಿ ಮಾರುಕಟ್ಟೆಗಳ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಇದು ಜಾಗತಿಕ ಖರೀದಿದಾರರಲ್ಲಿ ನಮ್ಮ ಕುರಿತ ಸದ್ಭಾವನೆಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಅಸೋಚಾಮ್ ಅಧ್ಯಕ್ಷ ನಿರಂಜನ ಹೀರಾನಂದಾನಿ ಅವರು ಹೇಳಿದರು.
ರೈತರ ಪ್ರತಿಭಟನೆಯು ಸಾರಿಗೆ ವೆಚ್ಚವನ್ನು ಶೇ.8ರಿಂದ ಶೇ.10ರಷ್ಟು ಹೆಚ್ಚಿಸಬಹುದು,ಜನರಿಗೆ ನೆರೆಯ ಪಟ್ಟಣಗಳಿಂದ ತಮ್ಮ ಕೆಲಸದ ಸ್ಥಳಗಳನ್ನು ತಲುಪಲು ಕಷ್ಟವಾಗುತ್ತಿದೆ,ಹೀಗಾಗಿ ದಿಲ್ಲಿ ಸುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿಯ ಹಲವಾರು ಕಂಪನಿಗಳು ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿವೆ ಎಂದ ಸಿಐಐ (ನಾರ್ದನ್ ರೀಜನ್) ಅಧ್ಯಕ್ಷ ನಿಖಿಲ್ ಸಾಹನಿ ಅವರು,ರೈತರ ಪ್ರತಿಭಟನೆಯು ಆರ್ಥಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮವನ್ನುಂಟು ಮಾಡುವ ಜೊತೆಗೆ ಪೂರೈಕೆ ಸರಣಿಗೂ ವ್ಯತ್ಯಯವನ್ನುಂಟು ಮಾಡಿದೆ. ಇದನ್ನು ತಕ್ಷಣವೇ ಸೌಹಾರ್ದಯುತವಾಗಿ ಬಗೆಹರಿಸುವ ಅಗತ್ಯವಿದೆ ಎಂದು ಹೇಳಿದರು.