ಹಸಿರು ಕಟ್ಟಡಗಳ ನಿರ್ಮಾಣಕ್ಕೆ ಏಕಗವಾಕ್ಷಿ ಅನುಮತಿಯ ಅಗತ್ಯವಿದೆ: ವೆಂಕಯ್ಯ ನಾಯ್ದು

Update: 2020-12-15 14:23 GMT

ಹೈದರಾಬಾದ್, ಡಿ.15: ತೆರಿಗೆ ರಿಯಾಯಿತಿ ಸೇರಿದಂತೆ ಹಲವು ಉಪಕ್ರಮಗಳ ಮೂಲಕ ಹಸಿರು ಕಟ್ಟಡಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಆರ್ಥಿಕ ಆಯೋಗ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮನವಿ ಮಾಡಿಕೊಂಡಿದ್ದಾರೆ.

ಜೊತೆಗೆ, ಎಲ್ಲಾ ರಾಜ್ಯಗಳೂ ಹಸಿರು ಕಟ್ಟಡಗಳ ನಿರ್ಮಾಣಕ್ಕೆ ಏಕಗವಾಕ್ಷಿ ಅನುಮತಿ ಒದಗಿಸಲು ಅನುಕೂಲವಾಗುವಂತೆ ಆನ್‌ಲೈನ್ ಪೋರ್ಟಲ್‌ಗಳನ್ನು ರೂಪಿಸುವಂತೆ ನಾಯ್ಡು ಕರೆ ನೀಡಿದ್ದಾರೆ. ಇಂಧನ ವಿಚಕ್ಷಣಾ ವಿಭಾಗದ ಇಂಧನ ಸಂರಕ್ಷಣಾ ಕಟ್ಟಡ ಸಂಹಿತೆ (ಇಸಿಬಿಸಿ) ದೇಶದಾದ್ಯಂತ ಏಕಪ್ರಕಾರವಾಗಿ ಜಾರಿಯಾಗಿಲ್ಲ. ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ತೆಲಂಗಾಣ ಮತ್ತು ಆಂಧ್ರಪ್ರದೇಶ ಸರಕಾರಗಳ ಪ್ರಯತ್ನ ಪ್ರಶಂಸನೀಯ ಎಂದವರು ಹೇಳಿದ್ದಾರೆ.

ಮಂಗಳವಾರ ಹೈದರಾಬಾದ್‌ನ ಗೃಹ (ಗ್ರೀನ್ ರೇಟಿಂಗ್ ಫಾರ್ ಇಂಟಿಗ್ರೇಟೆಡ್ ಹ್ಯಾಬಿಟೆಟ್ ಅಸೆಸ್‌ಮೆಂಟ್) ಸಮಿತಿ ಆಯೋಜಿಸಿದ್ದ 12ನೇ ಗೃಹ ಸಮ್ಮೇಳನಕ್ಕೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿ ಮಾತನಾಡಿದ ನಾಯ್ಡು, ಹಸಿರು ಕಟ್ಟಡ ಪರಿಕಲ್ಪನೆಗೆ ಖಾಸಗಿ ಮತ್ತು ಸರಕಾರಿ ಕ್ಷೇತ್ರದಲ್ಲಿ ಉತ್ತೇಜನ ನೀಡುವ ಅಗತ್ಯವಿದೆ. ಜಾಗತಿಕ ಹಸಿರು ಕಟ್ಟಡ ನಿರ್ಮಾಣ ಅಭಿಯಾನದ ನೇತೃತ್ವ ವಹಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದರು. ಗೃಹ ಸಮಿತಿಯ ಮೂರು ಇ-ಪ್ರಕಟಣೆಗಳಾದ 30 ಸ್ಟೋರೀಸ್ ಬಿಯಾಂಡ್ ಬಿಲ್ಡಿಂಗ್ಸ್, ಶಾಶ್ವತ ಮ್ಯಾಗಝಿನ್ ಹಾಗೂ ಸಮಿತಿಯ 2019ರ ಆವೃತ್ತಿ ಕೈಪಿಡಿಯನ್ನು ಉಪರಾಷ್ಟ್ರಪತಿ ಬಿಡುಗಡೆಗೊಳಿಸಿದರು.

ಹಸಿರು ನಿರ್ಮಾಣ ಅಭಿಯಾನ ಜನತೆಯ ಅಭಿಯಾನವಾಗಬೇಕು. ನಮ್ಮ ಪ್ರಾಚೀನ ನಾಗರಿಕ ಮೌಲ್ಯಗಳು ಪರಿಸರದೊಂದಿಗೆ ಸೌಹಾರ್ದಯುತವಾಗಿ ಬದುಕುವುದನ್ನು ನಮಗೆ ತಿಳಿಸಿಕೊಟ್ಟಿದೆ. ಸಾವಿರಾರು ವರ್ಷಗಳಿಂದ ಪರಿಷ್ಕರಿಸಲ್ಪಟ್ಟ ನಮ್ಮ ಸಾಂಪ್ರದಾಯಿಕ ಮತ್ತು ಪರಿಸರ ಸ್ನೇಹಿ ಮನೆ ವಿನ್ಯಾಸಗಳ ಬಗ್ಗೆ ಮರುಪರಿಶೀಲನೆ ನಡೆಸಬೇಕಿದೆ. ದುರದೃಷ್ಟವಶಾತ್, ನಮ್ಮ ಆಧುನಿಕ ವಿನ್ಯಾಸದ ಮನೆಗಳಲ್ಲಿ ಗುಬ್ಬಿಯೂ ಗೂಡು ಕಟ್ಟಿ ನೆಲೆಸಲು ಅವಕಾಶವಿಲ್ಲದಂತಾಗಿದೆ. ಇದು ನಮ್ಮ ಸಂಸ್ಕ್ರತಿಯಾಗಿ ಬಿಟ್ಟಿದೆ ಎಂದವರು ವಿಷಾದ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News