ಟ್ವಿಟರ್ ನಲ್ಲಿ 50 ಲಕ್ಷ ಫಾಲೋವರ್ಸ್ ಸಂಪಾದಿಸಿದ ಕೆ.ಎಲ್. ರಾಹುಲ್

Update: 2020-12-15 16:21 GMT

ಹೊಸದಿಲ್ಲಿ: 2014ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟಿರುವ ಭಾರತದ ವಿಕೆಟ್-ಕೀಪರ್-ಬ್ಯಾಟ್ಸ್ ಮನ್ ಕೆ.ಎಲ್.ರಾಹುಲ್ ಆ ನಂತರ ಕ್ಷಿಪ್ರಗತಿಯಲ್ಲಿ ಎಲ್ಲರ ಪ್ರೀತಿಯ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದಾರೆ.

ಟ್ವಿಟರ್ ನಲ್ಲಿ ಮಂಗಳವಾರ 5 ಮಿಲಿಯನ್ ಫಾಲೋವರ್ಸ್ ಗಳನ್ನು ತಲುಪಿದ ಕರ್ನಾಟಕದ ಬ್ಯಾಟ್ಸ್ ಮನ್ ರಾಹುಲ್ ತನ್ನೆಲ್ಲಾ ಬೆಂಬಲಿಗರಿಗೆ ಧನ್ಯವಾದ ಹೇಳಿದರು.

"ನಿಮ್ಮೆಲ್ಲರ ಬೆಂಬಲವು ನನ್ನ ಈ ಪಯಣವನ್ನು ವಿಶೇಷವಾಗಿಸಿದೆ. ಏಳು-ಬೀಳಿನಲ್ಲಿ ಸದಾ ಕಾಲ ನನ್ನೊಟ್ಟಿಗೆ ಇದ್ದೀರಿ. ನಿಮ್ಮ ಪ್ರೀತಿಗೆ ಧನ್ಯವಾದಗಳು’’ ಎಂದು ರಾಹುಲ್ ಟ್ವೀಟಿಸಿದರು.

ರಾಹುಲ್ ಪ್ರಸ್ತುತ ಆಸ್ಟ್ರೇಲಿಯದಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿಗಾಗಿ ತಯಾರಿ ನಡೆಸುತ್ತಿದ್ದಾರೆ.

ಆಸ್ಟ್ರೇಲಿಯದಲ್ಲಿ ಚೊಚ್ಚಲ ಪಂದ್ಯ ಆಡಿದ ಬಳಿಕ ರಾಹುಲ್ 36 ಟೆಸ್ಟ್, 35 ಏಕದಿನ ಹಾಗೂ 45 ಟಿ-20 ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ.

ಬಲಗೈ ಬ್ಯಾಟ್ಸ್ ಮನ್ ಸೀಮಿತ ಓವರ್ ಕ್ರಿಕೆಟ್ ನಲ್ಲಿ ಗಮನಾರ್ಹ ರನ್ ಕಲೆ ಹಾಕಿದ್ದಾರೆ. ಏಕದಿನದಲ್ಲಿ 45.83ರ ಸರಾಸರಿಯಲ್ಲಿ 4 ಶತಕಗಳ ಸಹಿತ 1,332 ರನ್ ಹಾಗೂ ಟಿ-20ಯಲ್ಲಿ 44.05ರ ಸರಾಸರಿಯಲ್ಲಿ ಎರಡು ಶತಕಗಳ ಸಹಿತ 1,542 ರನ್ ಗಳಿಸಿದ್ದಾರೆ. ಸ್ಥಿರ ಪ್ರದರ್ಶನ ನೀಡುತ್ತಿರುವ ರಾಹುಲ್ ಆಸ್ಟ್ರೇಲಿಯದಲ್ಲಿ ಇತ್ತೀಚೆಗೆ ಕೊನಗೊಂಡಿರುವ ಸೀಮಿತ ಓವರ್ ಕ್ರಿಕೆಟ್ ನಲ್ಲಿ ಉಪ ನಾಯಕನಾಗಿ ನೇಮಕಗೊಂಡಿದ್ದರು.

ರಾಹುಲ್ 2020ರ ಐಪಿಎಲ್ ನಲ್ಲಿ ಕಿಂಗ್ಸ್ ಪಂಜಾಬ್ ತಂಡದ ನಾಯಕತ್ವವಹಿಸಿದ್ದರು. ಪಂಜಾಬ್ ನಾಕೌಟ್  ಹಂತಕ್ಕೇರಲು ವಿಫಲವಾಗಿದ್ದರೂ ರಾಹುಲ್ ಗರಿಷ್ಟ ಸ್ಕೋರರ್ ಆಗಿ ಹೊರಹೊಮ್ಮಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News