ರೈತರ ವಿರುದ್ಧ ಹಾಡು ರಚಿಸದ್ದಕ್ಕೆ ನನ್ನನ್ನು ಸರಕಾರದ ಪ್ರಚಾರ ಸಮಿತಿಯಿಂದ ಹೊರದಬ್ಬಲಾಯಿತು: ರಾಕಿ ಮಿತ್ತಲ್

Update: 2020-12-15 18:30 GMT
www.facebook.com/rocky.mittal.75098

ಚಂಡೀಗಢ,ಡಿ.15: ಹರ್ಯಾಣ ಸರಕಾರದ ವಿಶೇಷ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದ ಜೈ ಭಗವಾನ್ ಯಾನೆ ರಾಕಿ ಮಿತ್ತಲ್ ರನ್ನು ಸೋಮವಾರದಂದು ಹರ್ಯಾಣ ಸರಕಾರ ತತ್ ಕ್ಷಣಕ್ಕೆ ಜಾರಿಗೆ ಬರುವಂತೆ ಅಧಿಕಾರದಿಂದ ವಜಾ ಮಾಡಿದೆ. ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಕಾರಣ ನೀಡಿರಲಿಲ್ಲ.

ಆದರೆ ಇದೀಗ ಸ್ವತಃ ರಾಕಿ ಮಿತ್ತಲ್ ರವರೇ ಹೇಳಿಕೆ ನೀಡಿದ್ದು, “ರೈತರ ವಿರುದ್ಧ ಹಾಡುಗಳನ್ನು ರಚಿಸದ ಕಾರಣಕ್ಕಾಗಿ ನನ್ನನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.

ಹರ್ಯಾಣದ ಮಾಹಿತಿ, ಸಾರ್ವಜನಿಕ ಸಂಪರ್ಕ ಮತ್ತು ಭಾಷೆ ವಿಭಾಗದ ಸಹಾಯಕ ಪ್ರಧಾನ ಕಾರ್ಯದರ್ಶಿಯಾಗಿರುವ ಧೀರ ಖಂಡೇಲ್ವಾಲ್ ಎಂಬವರು ರಾಕಿ ಮಿತ್ತಲ್ ರನ್ನು ವಿಶೇಷ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನದಿಂದ ತತ್ ಕ್ಷಣಕ್ಕೆ ಜಾರಿಗೆ ಬರುವಂತೆ ವಜಾ ಮಾಡಿದ್ದಾಗಿ ಆದೇಶ ಹೊರಡಿಸಿದ್ದರು. ಆದರೆ ಈ ಕುರಿತು ಬಿಜೆಪಿ ಪಕ್ಷದ ಪ್ರಮುಖರನ್ನು ಪ್ರಶ್ನಿಸಿದಾಗ ನಮಗಿದರ ಅರಿವಿಲ್ಲ ಎಂದು ಹೇಳಿದ್ದಾಗಿ indianexpress.com ವರದಿ ಮಾಡಿದೆ.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯ ಪರವಾಗಿ ಹಾಡುಗಳನ್ನು ರಚಿಸಿದ್ದ ರಾಕಿ ಮಿತ್ತಲ್ ಬಳಿಕ ‘ಮೋದಿ ಭಗತ್’ ಎಂದೇ ಪ್ರಸಿದ್ಧರಾಗಿದ್ದರು. “ನಾನು ಡಿ.4ರಂದು ಸರಕಾರದ ಹಾಗೂ ಬಿಜೆಪಿಯ ಹಿರಿಯ ಕಾರ್ಯಕಾರಿಯೋರ್ವರನ್ನು ಭೇಟಿಯಾಗಲು ತೆರಳಿದ್ದೆ. ಈ ವೇಳೆ ಕಳೆದ ಆರು ವರ್ಷಗಳಲ್ಲಿ ಪ್ರಚಾರಕ್ಕೆಂದು 1,500ಕೋಟಿ ರೂ. ಖರ್ಚು ಮಾಡಿದ್ದರೂ ಕೂಡಾ ಯಾವುದೇ ಪ್ರಚಾರ ಕಾರ್ಯಗಳು ಯಾಕೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದ್ದೆ. ಅಧಿಕಾರಿಗಳು ನಿಮ್ಮನ್ನು ಇಷ್ಟಪಡುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು. ನಾನು ಅಧಿಕಾರಿಗಳ ಕುರಿತು ಮಾತನಾಡುತ್ತಿಲ್ಲ, 1500ಕೋಟಿ ರೂ.ಯಕುರಿತು ಮಾತನಾಡುತ್ತಿದ್ದೇನೆ ಎಂದು ಉತ್ತರಿಸಿದೆ”

“ಈ ವೇಳೆ ಪ್ರತಿಕ್ರಿಯಿಸಿದ ಅವರು, ನೀನು ಈ ವಿಚಾರವನ್ನು ಇಲ್ಲಿಯೇ ಬಿಟ್ಟು ಬಿಡು, ರೈತ ಆಂದೋಲನದ ವಿರುದ್ಧ ಹಾಡೊಂದನ್ನು ರಚಿಸು ಎಂದರು. ನನ್ನಿಂದ ರೈತರ ವಿರುದ್ಧ ಹಾಡು ರಚಿಸಲು ಸಾಧ್ಯವಿಲ್ಲ. ಯಾಕೆಂದರೆ ನಾನೊಬ್ಬ ರೈತ ಮತ್ತು ಓರ್ವ ಮಧ್ಯವರ್ತಿಯೂ ಹೌದು ಎಂದು ಪ್ರತಿಕ್ರಿಯಿಸಿದೆ. ಹಾಗಾದರೆ ನಿನ್ನಿಂದ ನಮಗೇನು ಅವಶ್ಯಕತೆ? ಎಂದು ಕೇಳಿದಾಗ, ಅದು ನಿಮಗೆ ಬಿಟ್ಟ ವಿಚಾರ ಎಂದೆ.

“ನಾನು ಹಾಡು ರಚಿಸಿ, ಆ ಹಾಡಿನ ಮುಖಾಂತರ ರೈತರಿಗೆ ಮತ್ತು ಮಧ್ಯವರ್ತಿಗಳಿಗೆ ಸರಕಾರದ ನೂತನ ಕೃಷಿ ಕಾಯ್ದೆಯು ನಿಮಗೆ ಲಾಭವನ್ನೇ ತರುತ್ತದೆ ಎಂದು ಪೊಳ್ಳು ಮನವರಿಕೆ ಮಾಡಿಸಬೇಕಿತ್ತು. ನನ್ನ ತಂದೆ ಓರ್ವ ದಲ್ಲಾಳಿಯಾಗಿದ್ದರು ಮತ್ತು ನಮ್ಮದು ರೈತ ಕುಟುಂಬ. ನಾನು  ಓಲೈಕೆಗೆ ಮಣಿದು ನಮ್ಮವರ ಬೆನ್ನಿಗೆ ಚೂರಿ ಇರಿಯಲು ಹೇಗೆ ಸಾಧ್ಯ? ನಾನು ರೈತರ ವಿರುದ್ಧ ಹಾಡು ರಚಿಸದ್ದು ನನ್ನ ತಪ್ಪೇ? ಪ್ರಧಾನಿ ನರೇಂದ್ರ ಮೋದಿಯ ಪರ ಹಾಡು ರಚಿಸುವುದಕ್ಕಾಗಿ ನನಗೆ ತಿಂಗಳಿಗೆ ಒಂದು ಲಕ್ಷ ರೂ., ವೇತನ ನೀಡಲಾಗುತ್ತಿತ್ತು ಎಂದು ರಾಕಿ ಮಿತ್ತಲ್ ಹೇಳಿದ್ದಾಗಿ indianexpress.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News