×
Ad

ಪರಿಶಿಷ್ಟ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಕೋಟಾ : ಸರ್ಕಾರ ಚಿಂತನೆ

Update: 2020-12-16 10:51 IST

ಮುಂಬೈ: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶದಲ್ಲಿ ಕೋಟಾ ನಿಗದಿಪಡಿಸಿದ ಬಳಿಕ, ಕ್ಯಾಂಪಸ್‌ನಲ್ಲಿ ಅವರ ವಾಸ್ತವ್ಯಕ್ಕೂ ಕೋಟಾ ನಿಗದಿಪಡಿಸಲು ಸರ್ಕಾರ ಮುಂದಾಗಿದೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಹಣಕಾಸು ನೆರವು ಯೋಜನೆಯಡಿ, ಹಾಸ್ಟೆಲ್‌ಗಳಲ್ಲಿ ಎಸ್ಸಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್‌ವರ್ಕ್‌ನಲ್ಲಿ ಸ್ಥಾನ ಪಡೆದ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳು, ಪರಿಶಿಷ್ಟ ವಿದ್ಯಾರ್ಥಿಗಳಿಗೆ ಎಷ್ಟು ಹಾಸ್ಟೆಲ್ ಸೌಲಭ್ಯ ಅಗತ್ಯ ಎಂಬ ಬಗ್ಗೆ ಸಮಗ್ರವಾಗಿ ಅಗತ್ಯತೆ ಸಮೀಕ್ಷೆ ನಡೆಸುವಂತೆ ಸಚಿವಾಲಯ ಸೂಚಿಸಿದೆ.

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಇರುವ ಹಾಸ್ಟೆಲ್ ವಿವರ, ಆಯಾ ಕಾಲೇಜುಗಳಲ್ಲಿ ನೋಂದಣಿಯಾಗಿರುವ ಎಸ್ಸಿ ವಿದ್ಯಾರ್ಥಿಗಳ ಸಂಖ್ಯೆ, ಎಸ್ಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಲಭ್ಯತೆಯಲ್ಲಿ ಇರುವ ಅಂತರ, ಎಸ್ಸಿ ವಿದ್ಯಾರ್ಥಿಗಳಿಗೆ ವಿಶೇಷ ಹಾಸ್ಟೆಲ್ ನಿರ್ಮಿಸಲು ಅಗತ್ಯವಾದ ಜಾಗದ ಬಗ್ಗೆ ವಿವರ ನೀಡುವಂತೆ ಸೂಚಿಸಲಾಗಿದೆ.

ಈ ಹಾಸ್ಟೆಲ್‌ಗಳ ದೈನಂದಿನ ನಿರ್ವಹಣೆಗೆ ಎಂಜಿನಿಯರಿಂಗ್ ಕಾಲೇಜುಗಳು ಆಸಕ್ತಿ ಹೊಂದಿವೆಯೇ ಎಂಬ ಬಗ್ಗೆಯೂ ಮಾಹಿತಿ ಕೋರಲಾಗಿದೆ. ಈ ಯೋಜನೆಯನ್ನು ಎನ್‌ಐಎಫ್‌ಆರ್- ರ್ಯಾಂಕಿಂಗ್ ಪಡೆದ ಕಾಲೇಜುಗಳು ಅನುಷ್ಠಾನಗೊಳಿಸಲು ಪ್ರಸ್ತಾವಿಸಲಾಗಿದೆ. ಈ ಮೂಲಕ ವಸತಿ ಸೌಕರ್ಯವಿಲ್ಲದೇ ಎಸ್ಸಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಸೌಲಭ್ಯದಿಂದ ವಂಚಿತರಾಗುವುದು ತಪ್ಪಲಿದೆ" ಎಂದು ಉನ್ನತ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಬಾಬು ಜಗಜೀವನರಾಂ ಛಾತ್ರಾವಾಸ್ ಯೋಜನೆಯಡಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮತ್ತು ವಿಸ್ತರಣೆಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಸಂಸ್ಥೆಗಳಿಗೆ ನೆರವು ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News