ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಕೊಚ್ಚಿ ಮೇಯರ್ ಅಭ್ಯರ್ಥಿಗೆ 1 ಮತದಿಂದ ಸೋಲು
ತಿರುವನಂತಪುರ: ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಈ ತಿಂಗಳು ಮೂರು ಹಂತಗಳಲ್ಲಿ ನಡೆದಿದ್ದು, ಬುಧವಾರ ಬೆಳಗ್ಗೆ ಮತ ಎಣಿಕೆ ಆರಂಭವಾಗಿದೆ.
ಕೊಚ್ಚಿ ಕಾರ್ಪೋರೇಶನ್ ನಲ್ಲಿ ಕಾಂಗ್ರೆಸ್ ನ ಮೇಯರ್ ಅಭ್ಯರ್ಥಿ ಕೇವಲ ಒಂದು ಮತದಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎನ್. ವೇಣುಗೋಪಾಲ್ (181 ಮತಗಳು) ಐಲ್ಯಾಂಡ್ ನಾರ್ತ್ ವಾರ್ಡ್ ನಲ್ಲಿ ಬಿಜೆಪಿಯ ಟಿ. ಪದ್ಮಕುಮಾರಿ (182) ವಿರುದ್ಧ ಸೋತಿದ್ದಾರೆ.
ಕೊಚ್ಚಿ ಕಾರ್ಪೋರೇಶನ್ ನಲ್ಲಿ ಯು ಡಿ ಎಫ್ 17 ಸ್ಥಾನಗಳಲ್ಲಿ ಮುನ್ನಡೆ ಪಡೆಯುವುದರೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎಲ್ ಡಿ ಎಫ್ 16ರಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ ನೇತೃತ್ವದ ಎನ್ ಡಿಎ 9ರಲ್ಲಿ ಮುನ್ನಡೆಯಲ್ಲಿದೆ.
"ನನಗೆ ಗೆಲ್ಲುವ ಕುರಿತು ಸಂಪೂರ್ಣ ವಿಶ್ವಾಸವಿತ್ತು. ಏನು ನಡೆಯಿತ್ತೆಂದು ನನಗೆ ಹೇಳಲು ಸಾಧ್ಯವಾಗುತ್ತಿಲ್ಲ. ಪಕ್ಷದೊಳಗೆ ಯಾವುದೇ ಸಮಸ್ಯೆ ಇರಲಿಲ್ಲ. ಮತಯಂತ್ರದಲ್ಲಿ ಸಮಸ್ಯೆ ಇತ್ತು. ಇದು ಬಿಜೆಪಿಯ ಗೆಲುವಿಗೆ ಕಾರಣವಾಗಿರಬಹುದು. ಮತ ಯಂತ್ರದ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯದ ಮೊರೆ ಹೋಗಲು ನಾನು ಈ ತನಕ ನಿರ್ಧರಿಸಿಲ್ಲ. ಮತ ಮರು ಎಣಿಕೆ ನಡೆಸುವಂತೆ ಆಗ್ರಹಿಸಲಾಗುವುದು'' ಎಂದು ಬಿಜೆಪಿ ಅಭ್ಯರ್ಥಿ ಎದುರು 1 ಮತದಿಂದ ಸೋತ ಕಾಂಗ್ರೆಸ್ ನ ಮೇಯರ್ ಅಭ್ಯರ್ಥಿ ಎನ್. ವೇಣುಗೋಪಾಲ್ ಹೇಳಿದ್ದಾರೆ.