ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್ ಗೆ ವೈ ಶ್ರೇಣಿಯ ಭದ್ರತೆ
ಚಂಡೀಗಢ: ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಬೆಂಬಲಿಸಿ ಕೆಲವೇ ದಿನಗಳ ಹಿಂದೆ ಹೇಳಿಕೆ ನೀಡಿ ದಿಲ್ಲಿಯ ಸಮೀಪದ ಹೆದ್ದಾರಿಗಳಲ್ಲಿ ಪ್ರತಿಭಟನಾನಿರತ ಸಾವಿರಾರು ರೈತರನ್ನು ಪ್ರಚೋದಿಸಿದ್ದ ನಟ ಹಾಗೂ ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ
64ರ ವಯಸ್ಸಿನ ಸನ್ನಿ ಡಿಯೋಲ್ ಗೆ ಇದೀಗ ವೈ-ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದ್ದು, ಇಬ್ಬರು ಕಮಾಂಡೋಗಳು ಹಾಗೂ ಪೊಲೀಸರ ಸಹಿತ 11 ಸಿಬ್ಬಂದಿಗಳು ಡಿಯೋಲ್ ಗೆ ರಕ್ಷಣೆ ನೀಡಲಿದ್ದಾರೆ.
ಪಂಜಾಬ್ ನ ಗುರುದಾಸ್ ಪುರ ಸಂಸದನಾಗಿರುವ ಡಿಯೋಲ್ ರೈತರ ಪ್ರತಿಭಟನೆಯ ಕುರಿತು ಮೌನವಹಿಸಿದ್ದಕ್ಕೆ ಪ್ರಶ್ನಿಸಲಾಗಿತ್ತು. ಕಳೆದ ವಾರ ಟ್ವಿಟರ್ ನಲ್ಲಿ ಪೋಸ್ಟ್ ಹಾಕಿದ್ದ ಡಿಯೋಲ್ "ಕೃಷಿ ಕಾನೂನಿನ ವಿಚಾರ ಕೇಂದ್ರ ಸರಕಾರ ಹಾಗೂ ರೈತರಿಗೆ ಸಂಬಂಧಪಟ್ಟದ್ದಾಗಿದೆ. ಕೆಲವರು ಸಮಸ್ಯೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಹಲವರು ಈ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ನನಗೆ ಗೊತ್ತಿದೆ. ಅವರು ರೈತರ ಕುರಿತು ಯೋಚಿಸುತ್ತಿಲ್ಲ. ಅವರಿಗೆ ತಮ್ಮದೆ ಆದ ಕಾರ್ಯಸೂಚಿ ಇದೆ. ನಾನು ನನ್ನ ಪಕ್ಷದೊಂದಿಗೆ, ರೈತರುಗಳ ಜೊತೆ ಸದಾ ಕಾಲ ನಿಲ್ಲುತ್ತೇನೆ'' ಎಂದು ಬರೆದಿದ್ದರು.