‘ಸೇನಾ ಸಮವಸ್ತ್ರ’ ಧರಿಸಿ ಪ್ರತಿಭಟಿಸುತ್ತಿರುವ ಈತ ನಿಜಕ್ಕೂ ಸೈನಿಕನೇ?
ಭಟಿಂಡಾ,ಡಿ.16: ಭಟಿಂಡಾದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಸೇನಾ ಸಮವಸ್ತ್ರ ಧರಿಸಿ ಭಾಗಿಯಾಗಿರುವ ವ್ಯಕ್ತಿಯೊಬ್ಬ ಎಲ್ಲರ ಗಮನ ಸೆಳೆದಿದ್ದು, ಆತ ನಿಜವಾಗಿಯೂ ಸೇನಾ ಜವಾನನೇ ಅಥವಾ ಜವಾನರ ಸಮವಸ್ತ್ರ ಮಾತ್ರ ಧರಿಸಿದವನೇ ಎಂದು ತಿಳಿಯುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.
ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿರುವ ಚಿತ್ರದಲ್ಲಿ ಸೇನಾ ಜವಾನರ ಸಮವಸ್ತ್ರ ಧರಿಸಿರುವ ಸಿಖ್ ವ್ಯಕ್ತಿಯೊಬ್ಬ ಕೈಯ್ಯಲ್ಲಿ ಪೋಸ್ಟರ್ ಹಿಡಿದಿರುವುದು ಕಾಣಿಸುತ್ತದೆ. ಆ ಪೋಸ್ಟರ್‍ನಲ್ಲಿ “ನನ್ನ ತಂದೆ ಒಬ್ಬ ರೈತ. ಆತ ಒಬ್ಬ ಉಗ್ರವಾದಿಯೆಂದಾದರೆ ನಾನು ಕೂಡ ಉಗ್ರವಾದಿ” ಎಂದು ಬರೆದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸೇನಾಧಿಕಾರಿ ಲೆ. ಜನರಲ್ ಎಚ್.ಎಸ್ ಪನಾಗ್, “ಸೇನೆಗೆ ಸ್ಪಷ್ಟ ನೀತಿ ನಿಯಮಾವಳಿಗಳಿವೆ, ಇದು ಸರಿಯಲ್ಲ. ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು,” ಎಂದಿದ್ದಾರೆ.
ಸೇನಾ ನಿಯಮಗಳ ಪ್ರಕಾರ ಮಿಲಿಟರಿಯಲ್ಲಿ ಸೇವೆಯಲ್ಲಿರುವವರಿಗೆ ಇಂತಹ ಪ್ರತಿಭಟನೆಗಳಲ್ಲಿ ಭಾಗಿಯಾಗಲು ಅವಕಾಶವಿಲ್ಲ. “ಈ ಯುವಕ ನಿಜವಾಗಿಯೂ ಸೈನಿಕನೇ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ಮಾಜಿ ಸೈನಿಕರು ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕೆ ಆಕ್ಷೇಪವಿಲ್ಲವಾದರೂ ಸೇವೆಯಲ್ಲಿರುವವರು ಭಾಗಿಯಾದರೆ ಕಠಿಣ ಶಿಕ್ಷೆ ಕಾದಿದೆ” ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.