×
Ad

ನಾವು ನಿಮ್ಮ ಹಾಗೆ ನಕಲಿ ಕೋವಿಡ್ ಪರೀಕ್ಷೆಗಳನ್ನು ನಡೆಸುವುದಿಲ್ಲ: ಆದಿತ್ಯನಾಥ್ ವಿರುದ್ಧ ಕೇಜ್ರಿವಾಲ್ ಟೀಕಾಸ್ತ್ರ

Update: 2020-12-16 20:27 IST

ಹೊಸದಿಲ್ಲಿ,ಡಿ.16: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ದಾಳಿ ನಡೆಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು , ಯೋಗಿಜಿಯವರಿಗೆ ಮಲಗಿದ್ದಾಗಲೂ ಎದ್ದಾಗಲೂ ದಿಲ್ಲಿ ಸರಕಾರ ಮತ್ತು ಆಮ್ ಆದ್ಮಿ ಪಾರ್ಟಿ ಮಾತ್ರ ಕಾಣುತ್ತವೆ ಎಂದು ಕುಟುಕಿದ್ದಾರೆ. ‘ಯೋಗಿಜಿ, ಕೊರೋನ ವಿರುದ್ಧ ನಮ್ಮ ಕೆಲಸದ ಬಗ್ಗೆ ಉತ್ತರ ಪ್ರದೇಶದ ಬೀದಿ ಬೀದಿಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ನಾವು ನಿಮ್ಮ ಹಾಗೆ ನಕಲಿ ಕೊರೋನ ವೈರಸ್ ಪರೀಕ್ಷೆಗಳನ್ನು ನಡೆಸುವುದಿಲ್ಲ. ನಿಮ್ಮ ಸಚಿವರ ಆಹ್ವಾನದ ಮೇರೆಗೆ ಚರ್ಚೆಗಾಗಿ ದಿಲ್ಲಿಯ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಡಿ.22ರಂದು ಲಕ್ನೋಕ್ಕೆ ಬರಲಿದ್ದಾರೆ ’ಎಂದು ಕೇಜ್ರಿವಾಲ್‌ಬುಧವಾರ ಟ್ವೀಟಿಸಿದ್ದಾರೆ.

 ಉತ್ತರ ಪ್ರದೇಶದ ಬರೇಲಿಯಲ್ಲಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ತೋರಿಸಲು ನಕಲಿ ಹೆಸರುಗಳನ್ನು ಸೇರಿಸಲಾಗಿದೆ ಎಂಬ ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಈ ಟೀಕೆ ಮಾಡಿದ್ದಾರೆ.

ತನ್ಮಧ್ಯೆ,ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ರಾಜ್ಯವು ಕನಿಷ್ಠ ಪಾಸಿಟಿವಿಟಿ ದರ ಹಾಗೂ ಕನಿಷ್ಠ ಸಾವಿನ ದರಗಳನ್ನು ಹೊಂದಿದೆ ಎಂದು ಹೇಳಿಕೊಂಡಿದ್ದಾರೆ.

ಶಿಕ್ಷಣ ಕೇತ್ರದಲ್ಲಿ ಮಾಡಿರುವ ಕೆಲಸಗಳಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರು ದಿಲ್ಲಿ ಮತ್ತು ಉತ್ತರ ಪ್ರದೇಶಗಳನ್ನು ಹೋಲಿಸಿರುವ ಹಿನ್ನೆಲೆಯಲ್ಲಿ ಉ.ಪ್ರ.ಪ್ರಾಥಮಿಕ ಶಿಕ್ಷಣ ಸಚಿವ ಸತೀಶ್ ದ್ವಿವೇದಿ ಅವರು ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರನ್ನು ರಾಜ್ಯದಲ್ಲಿಯ ಶಾಲೆಗಳಿಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ.

‘ದಿಲ್ಲಿಯಲ್ಲಿ 1ರಿಂದ 12ನೇ ತರಗತಿಗಳಿಗಾಗಿ 1,024 ಸರಕಾರಿ ಶಾಲೆಗಳಿವೆ, ಉತ್ತರ ಪ್ರದೇಶದ ಅತ್ಯಂತ ಸಣ್ಣ ಜಿಲ್ಲೆಯಲ್ಲಿಯೇ 1ರಿಂದ 8ನೇ ತರಗತಿಗಳಿಗಾಗಿ ಕನಿಷ್ಠ 2,000 ಶಾಲೆಗಳಿವೆ. 1,024 ಶಾಲೆಗಳಿರುವ ರಾಜ್ಯವನ್ನು 1.59 ಲಕ್ಷ ಶಾಲೆಗಳನ್ನು ಹೊಂದಿರುವ ರಾಜ್ಯದೊಂದಿಗೆ ಹೋಲಿಸಿರುವವರ ಬುದ್ಧಿಮತ್ತೆಯ ಬಗ್ಗೆ ಕನಿಕರವನ್ನಷ್ಟೇ ನಾನು ತೋರಿಸಬಲ್ಲೆ ’ಎಂದು ದ್ವಿವೇದಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News