×
Ad

3,500 ಕೋ.ರೂ.ಸಕ್ಕರೆ ರಫ್ತು ಸಬ್ಸಿಡಿಗೆ ಸಂಪುಟದ ಒಪ್ಪಿಗೆ

Update: 2020-12-16 20:49 IST

ಹೊಸದಿಲ್ಲಿ,ಡಿ.16: ಕಬ್ಬು ಬೆಳೆಗಾರರಿಗೆ ಬಾಕಿಗಳನ್ನು ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ ನೆರವಾಗುವ ತನ್ನ ಪ್ರಯತ್ನಗಳ ಅಂಗವಾಗಿ ಹಾಲಿ ಮಾರಾಟ ವರ್ಷ (ಅಕ್ಟೋಬರ್‌ನಿಂದ ಸೆಪ್ಟೆಂಬರ್‌ವರೆಗೆ)ದಲ್ಲಿ 60 ಲಕ್ಷ ಟನ್ ಸಕ್ಕರೆ ರಫ್ತಿಗಾಗಿ ಅವುಗಳಿಗೆ 3,500 ಕೋ.ರೂ.ಗಳ ಸಬ್ಸಿಡಿ ಪ್ರಸ್ತಾವಕ್ಕೆ ಸರಕಾರವು ಬುಧವಾರ ಒಪ್ಪಿಗೆ ನೀಡಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು,ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಸಬ್ಸಿಡಿ ಪ್ರಸ್ತಾವಕ್ಕೆ ಅನುಮತಿ ನೀಡಿದೆ ಮತ್ತು ಸಬ್ಸಿಡಿ ಮೊತ್ತವನ್ನು ನೇರವಾಗಿ ರೈತರಿಗೆ ಪಾವತಿಸಲಾಗುವುದು ಎಂದು ತಿಳಿಸಿದರು.

260 ಲಕ್ಷ ಟನ್ ವಾರ್ಷಿಕ ಬೇಡಿಕೆಗೆ ಹೋಲಿಸಿದರೆ ದೇಶದಲ್ಲಿ 310 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿರುವುದರಿಂದ ಸಕ್ಕರೆ ಉದ್ಯಮ ಮತ್ತು ಕಬ್ಬು ಬೆಳೆಗಾರರು ಬಿಕ್ಕಟ್ಟು ಎದುರಿಸುತ್ತಿದ್ದಾರೆ ಎಂದ ಅವರು,ಸಬ್ಸಿಡಿ ನಿರ್ಧಾರದಿಂದ ಐದು ಕೋಟಿ ರೈತರಿಗೆ ಲಾಭವಾಗಲಿದೆ ಎಂದರು.

 ಕಳೆದ ಮಾರಾಟ ವರ್ಷದಲ್ಲಿ ಸರಕಾರವು ಪ್ರತಿ ಟನ್ ಸಕ್ಕರೆಗೆ 10,448 ರೂ.ಗಳ ಸಬ್ಸಿಡಿಯನ್ನು ಒದಗಿಸಿತ್ತು ಮತ್ತು ಇದರಿಂದ ಬೊಕ್ಕಸಕ್ಕೆ 6,268 ಕೋ.ರೂ.ಗಳ ಹೊರೆಯುಂಟಾಗಿತ್ತು. ಆ ವರ್ಷ ಕಾರ್ಖಾನೆಗಳು 57 ಲಕ್ಷ ಟನ್ ಸಕ್ಕರೆಯನ್ನು ರಫ್ತು ಮಾಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News