×
Ad

ಪಿಎಂ ಕೇರ್ಸ್ ಫಂಡ್‌ನ ಸ್ವರೂಪದ ಬಗ್ಗೆ ಗೊಂದಲ

Update: 2020-12-16 20:59 IST

ಹೊಸದಿಲ್ಲಿ, ಡಿ.16: ಕೊರೋನ ಸೋಂಕಿನ ವಿರುದ್ಧದ ಕಾರ್ಯಾಚರಣೆಗೆ ನೆರವಾಗಲು ಸ್ಥಾಪಿಸಿರುವ ಪಿಎಂ ಕೇರ್ಸ್ ಫಂಡ್ ಸರಕಾರಿ ಟ್ರಸ್ಟ್ ಆಗಿದೆಯೇ ಅಥವಾ ಖಾಸಗಿ ಟ್ರಸ್ಟ್‌ನಂತೆ ಕಾರ್ಯನಿರ್ವಹಿಸುತ್ತದೆಯೇ ಎಂಬ ಬಗ್ಗೆ ಗೊಂದಲ ಮೂಡಿದೆ. ಇದು ಕಾರ್ಪೊರೇಟ್ ದೇಣಿಗೆಯ ಉದ್ದೇಶಕ್ಕಾಗಿ ಸ್ಥಾಪಿಸಿರುವ ಸರಕಾರಿ ಟ್ರಸ್ಟ್ ಎಂದು ವ್ಯಾಖ್ಯಾನಿಸಲಾಗಿದ್ದರೂ, ಟ್ರಸ್ಟ್‌ನ ದಾಖಲೆ ಪತ್ರದಲ್ಲಿರುವ ಅನುಚ್ಛೇದದಲ್ಲಿ ಇದನ್ನು ಖಾಸಗಿ ಘಟಕ(ಆರ್‌ಟಿಐ ಪರಿಶೀಲನೆಯಿಂದ ವಿನಾಯಿತಿ ಪಡೆದಿರುವ) ಎಂದು ಹೆಸರಿಸಲಾಗಿದೆ.

ಪಿಎಂ ಕೇರ್ಸ್ ಫಂಡ್ ಅನ್ನು ದಿಲ್ಲಿಯ ಕಂದಾಯ ಇಲಾಖೆಯಲ್ಲಿ ನೋಂದಣಿ ಮಾಡಲಾಗಿದ್ದು ಪ್ರಧಾನಿ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ. ಆದರೆ ಟ್ರಸ್ಟ್ ಡೀಡ್‌ನಲ್ಲಿ ಇದನ್ನು ಸರಕಾರಿ ಟ್ರಸ್ಟ್ ಎಂದು ವ್ಯಾಖ್ಯಾನಿಸಿಲ್ಲ. ಟ್ರಸ್ಟ್ ಡೀಡ್‌ನ 5.3ನೇ ಉಲ್ಲೇಖದಲ್ಲಿ ‘ಟ್ರಸ್ಟ್ ಯಾವುದೇ ಸರಕಾರದ ಅಥವಾ ಸರಕಾರದ ಯಾವುದೇ ವ್ಯವಸ್ಥೆಯ ಸ್ವಾಮ್ಯಕ್ಕೆ ಒಳಪಟ್ಟಿಲ್ಲ ಅಥವಾ ನಿಯಂತ್ರಣದಲ್ಲಿಲ್ಲ ಮತ್ತು ಹಣಕಾಸಿನ ನೆರವು ಪಡೆದಿಲ್ಲ. ಟ್ರಸ್ಟ್‌ನ ಕಾರ್ಯನಿರ್ವಹಣೆಯ ಮೇಲೆ ಕೇಂದ್ರ ಸರಕಾರ ಅಥವಾ ಯಾವುದೇ ರಾಜ್ಯ ಸರಕಾರಗಳ ನೇರ ಅಥವಾ ಪರೋಕ್ಷ ನಿಯಂತ್ರಣವಿಲ್ಲ’ ಎಂದು ವ್ಯಾಖ್ಯಾನಿಸಲಾಗಿದೆ.

ಕೊರೋನ ಸೋಂಕಿನಂತಹ ತುರ್ತು ಮತ್ತು ವಿಪತ್ತಿನ ಪರಿಸ್ಥಿತಿಗಳನ್ನು ನಿರ್ವಹಿಸಲು ಕಳೆದ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಪ್ರೈಮ್ ಮಿನಿಸ್ಟರ್ಸ್ ಸಿಟಿಝನ್ ಅಸಿಸ್ಟೆನ್ಸ್ ಆ್ಯಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚುವೇಷನ್ ಫಂಡ್’ (ಪಿಎಂ ಕೇರ್ಸ್ ಫಂಡ್) ಸ್ಥಾಪಿಸಿದ್ದರು. ಪ್ರಧಾನಿ ಮೋದಿ ಅಧ್ಯಕ್ಷರಾಗಿದ್ದು ಸಚಿವ ಸಂಪುಟದ ಹಿರಿಯ ಸದಸ್ಯರು ಟ್ರಸ್ಟಿಗಳಾಗಿದ್ದಾರೆ. ಮಾರ್ಚ್ 27ರಂದು ಟ್ರಸ್ಟ್ ನೋಂದಾವಣೆಗೊಂಡಿತ್ತು.

ಮರುದಿನವೇ, ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಉಪಕ್ರಮದಡಿ ಕಾರ್ಪೊರೇಟ್ ದೇಣಿಗೆ ಪಡೆಯಲು ಟ್ರಸ್ಟ್ ಅರ್ಹ ಎಂಬ ಲಿಖಿತ ದಾಖಲೆಯನ್ನು ಕಾರ್ಪೊರೇಟ್ ವ್ಯವಹಾರಗಳ ಇಲಾಖೆ ಜಾರಿಗೊಳಿಸಿತ್ತು. ಸಾಮಾಜಿಕ - ಆರ್ಥಿಕ ಅಭಿವೃದ್ಧಿ ಕಾರ್ಯಗಳು, ಪರಿಶಿಷ್ಟ ಜಾತಿ, ಪಂಗಡ, ಇತರ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಕ್ಷೇಮಾಭ್ಯುದಯ ಉಪಕ್ರಮಗಳಿಗಾಗಿ ರಾಜ್ಯ ಅಥವಾ ಕೇಂದ್ರ ಸರಕಾರ ಆರಂಭಿಸಿರುವ ನಿಧಿಗಳು ಕಾರ್ಪೊರೇಟ್ ದೇಣಿಗೆ ಪಡೆಯಲು ಅರ್ಹವಾಗಿವೆ ಎಂದು ಕಂಪೆನಿಗಳ ಕಾಯ್ದೆಯಲ್ಲಿ ವ್ಯಾಖ್ಯಾನಿಸಲಾಗಿದೆ.

ಪಿಎಂ ಕೇರ್ಸ್ ಫಂಡ್ ಕೇಂದ್ರ ಸರಕಾರ ಸ್ಥಾಪಿಸಿರುವ ನಿಧಿ ಎಂದು ಇಲಾಖೆಯ ದಾಖಲೆಯಲ್ಲಿ ನಮೂದಿಸಿರುವುದು ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಅರ್ಜಿಯಡಿ ಪಡೆದಿರುವ ದಾಖಲೆಗಳಿಂದ ತಿಳಿದು ಬಂದಿದೆ. ಆದರೆ ಟ್ರಸ್ಟ್ ಡೀಡ್‌ನಲ್ಲಿ ‘ಪಿಎಂ ಕೇರ್ಸ್ ಫಂಡ್ ಸರಕಾರಿ ಅಧೀನದ ಟ್ರಸ್ಟ್ ಆಗಿಲ್ಲ ಮತ್ತು ಇದು ಕಾರ್ಪೊರೇಟ್ ದೇಣಿಗೆ ಪಡೆಯಲು ಅರ್ಹವಲ್ಲ’ ಎಂದು ವ್ಯಾಖ್ಯಾನಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. ನೋಂದಣಿಯಾದ ಸುಮಾರು 2 ತಿಂಗಳ ಬಳಿಕ, ಮೇ 26ರಂದು ಪಿಎಂ ಕೇರ್ಸ್ ಫಂಡ್ ಅನ್ನು ಕಂಪೆನಿಗಳ ಕಾಯ್ದೆಯಡಿ ತರಲಾಗಿದೆ. ಇದರರ್ಥ, ಸುಮಾರು 2 ತಿಂಗಳು ಪಿಎಂ ಕೇರ್ಸ್ ಫಂಡ್ ಖಾಸಗಿ ಸಂಸ್ಥೆಯಾಗಿದ್ದರೂ ಕಾರ್ಪೊರೇಟ್ ದೇಣಿಗೆಯನ್ನು ಪಡೆದಿದೆ. ಇದೇ ಪ್ರಶ್ನೆಯನ್ನು ಮುಂದಿಟ್ಟು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆಗಸ್ಟ್‌ನಲ್ಲಿ ಟ್ವೀಟ್ ಮಾಡಿದ್ದರು. ಪಿಎಂ ಕೇರ್ಸ್ ಫಂಡ್ ಖಾಸಗಿಯಾಗಿ ಸ್ಥಾಪನೆಗೊಂಡ ನಿಧಿಯಾಗಿದ್ದಲ್ಲಿ ಇದಕ್ಕೆ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ವಿಭಾಗದಲ್ಲಿ ದೇಣಿಗೆ ಸಂದಾಯವಾಗಿದ್ದು ಹೇಗೆ ? ಎಂದವರು ಪ್ರಶ್ನಿಸಿದ್ದರು.

 ಪಿಎಂ ಕೇರ್ಸ್ ಫಂಡ್‌ನ ಟ್ರಸ್ಟ್ ಡೀಡ್ ಒದಗಿಸುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಧಾನಿಯವರ ಕಚೇರಿಗೆ ಎನ್‌ಡಿ ಟಿವಿ ಅರ್ಜಿ ಸಲ್ಲಿಸಿತ್ತು. ಆದರೆ ಫಂಡ್ ಸಾರ್ವಜನಿಕ ಸಂಸ್ಥೆಯಾಗಿರದ ಹಿನ್ನೆಲೆಯಲ್ಲಿ ಅರ್ಜಿಯನ್ನು ತಳ್ಳಿ ಹಾಕಲಾಗಿದೆ ಎಂದು ಉತ್ತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News