ಬಡ ದೇಶಗಳಿಗೆ ಲಸಿಕೆ: ಫೈಝರ್, ಮೋಡರ್ನಾ ಜೊತೆ ಮಾತುಕತೆ
ಜಿನೀವ (ಸ್ವಿಟ್ಸರ್‌ಲ್ಯಾಂಡ್), ಡಿ. 16: ಆರಂಭಿಕ ಹಂತಗಳಲ್ಲಿ ಉತ್ಪಾದನೆಯಾಗುವ ಕೊರೋನ ವೈರಸ್ ಲಸಿಕೆಗಳ ಒಂದು ಭಾಗವನ್ನು ಬಡ ದೇಶಗಳಿಗೆ ಮಿತ ದರದಲ್ಲಿ ಪೂರೈಸುವ ಬಗ್ಗೆ ಫೈಝರ್ ಮತ್ತು ಮೋಡರ್ನಾ ಕಂಪೆನಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಂಗಳವಾರ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಬೆಂಬಲಿತ ಕೋವ್ಯಾಕ್ಸಿನ್ ಲಸಿಕೆ ವಿತರಣಾ ಘಟಕವು ಮುಂದಿನ ವರ್ಷದ ಕೊನೆಯ ವೇಳೆಗೆ ಸುಮಾರು 200 ಕೋಟಿ ಡೋಸ್ ಲಸಿಕೆಗಳನ್ನು ವಿತರಿಸುವ ಗುರಿಯನ್ನು ಹೊಂದಿದೆ.
ಲಸಿಕೆಗಳು ಲಭ್ಯವಿರುವಾಗ ಇಡೀ ಜಗತ್ತಿಗೆ ಅವುಗಳ ಸಮಾನ ವಿತರಣೆಯನ್ನು ಖಾತರಿಪಡಿಸುವುದಕ್ಕಾಗಿ ಕೋವ್ಯಾಕ್ಸಿನ್ ಲಸಿಕೆ ವಿತರಣಾ ಘಟಕವನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪಿಸಿದೆ.
ಆ್ಯಸ್ಟ್ರಝೆನೆಕ, ನೋವಾವ್ಯಾಕ್ಸ್ ಮತ್ತು ಸನೋಫಿ-ಜಿಎಸ್‌ಕೆಗಳು ಅಭಿವೃದ್ಧಿಪಡಿಸುತ್ತಿರುವ ಸಂಭಾವ್ಯ ಕೊರೋನ ವೈರಸ್ ಲಸಿಕೆಗಳ ಕೋಟ್ಯಂತರ ಡೋಸ್‌ಗಳನ್ನು ಅದು ಈಗಾಗಲೇ ಕಾದಿರಿಸಿದೆ.
ಫೈಝರ್ ಮತ್ತು ಮೋಡರ್ನಾ ಕಂಪೆನಿಗಳ ಲಸಿಕೆಗಳು ವಿಶ್ವ ಆರೋಗ್ಯ ಸಂಸ್ಥೆಯ ಆರಂಭಿಕ ವಿತರಣಾ ಲಸಿಕೆಗಳ ಭಾಗವಾಗಬಹುದೇ ಎನ್ನುವುದನ್ನು ತಿಳಿಯಲು ಆ ಕಂಪೆನಿಗಳೊಂದಿಗೆ ಸಂಸ್ಥೆಯು ಮಾತುಕತೆಯಲ್ಲಿ ತೊಡಗಿದೆ ಎಂದು ಸಂಸ್ಥೆಯ ಹಿರಿಯ ಸಲಹೆಗಾರ ಬ್ರೂಸ್ ಐಲ್‌ವಾರ್ಡ್ ತಿಳಿಸಿದರು.
‘‘ಆದರೆ, ಈ ಲಸಿಕೆಗಳ ಬೆಲೆ ನಾವು ಸೇವೆ ನೀಡುವ ಜನರು ಮತ್ತು ಸಹಾಯ ಮಾಡುತ್ತಿರುವ ದೇಶಗಳ ಕೈಗೆಟಕುವಂತೆ ಇರುವುದನ್ನೂ ನಾವು ಖಾತರಿಪಡಿಸಬೇಕಾಗಿದೆ’’ ಎಂದರು.