1971ರ ಯುದ್ಧದ ವರ್ಷಾಚರಣೆ: ಜನತೆಗೆ ಶುಭಕೋರಿದ ರಾಹುಲ್ ಗಾಂಧಿ
ಹೊಸದಿಲ್ಲಿ, ಡಿ. 16: 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯ ಗಳಿಸಿರುವ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜನತೆಗೆ ಶುಭಾಶಯ ಕೋರಿದ್ದಾರೆ. ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾದ 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಜಯ ಗಳಿಸಿದ ವರ್ಷಾಚರಣೆಯನ್ನು ಭಾರತ ಡಿಸೆಂಬರ್ 16ರಂದು ಆಚರಿಸುತ್ತದೆ.
ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸುವ ಹಾಗೂ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಪಕ್ಷದ ಇತರ ನಾಯಕರೊಂದಿಗೆ ಪಾಲ್ಗೊಂಡರು. ಆಗಿನ ಕಾಲದಲ್ಲಿ ನಮ್ಮ ದೇಶದ ಪ್ರಧಾನಿಯನ್ನು ನೆರೆ ರಾಷ್ಟ್ರಗಳು ಗುರುತಿಸುತ್ತಿದ್ದವು. ಅಲ್ಲದೆ, ನಮ್ಮ ಗಡಿ ಉಲ್ಲಂಘಿಸಲು ಭಯಪಡುತ್ತಿದ್ದವು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘‘1971ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಐತಿಹಾಸಿಕವಾಗಿ ಜಯ ಗಳಿಸಿತ್ತು. ಇದಕ್ಕಾಗಿ ನಾನು ಜನತೆಗೆ ಶುಭಾಶಯ ಕೋರುತ್ತೇನೆ. ಭಾರತೀಯ ಸೇನೆಯ ಶೌರ್ಯಕ್ಕೆ ನಮನ ಸಲ್ಲಿಸುತ್ತೇನೆ’’ ಎಂದಿದ್ದಾರೆ.