×
Ad

ಸರ್ಕಾರದ ಅನ್ಯಾಯದ ವಿರುದ್ಧ ಜೀವತ್ಯಾಗ ಮಾಡುತ್ತೇನೆಂದು ಬರೆದಿಟ್ಟು ಆತ್ಮಹತ್ಯೆಗೈದ ಸಿಖ್ ಧರ್ಮಗುರು

Update: 2020-12-16 22:31 IST
twitter/sukhbir singh badal

ಹೊಸದಿಲ್ಲಿ,ಡಿ.16: ಹರ್ಯಾಣದಲ್ಲಿರುವ ಗುರುದ್ವಾರವೊಂದರ ಧರ್ಮಗುರು ಬಾಬಾ ರಾಮ್ ಸಿಂಗ್ ಎಂಬವರು ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಬಳಿಕ ಸ್ವತಃ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಘಟನೆಯು ದೆಹಲಿ-ಸೋನಿಪತ್ ಗಡಿಪ್ರದೇಶದ ಕುಂಡ್ಲಿ ಎಂಬಲ್ಲಿ ನಡೆದಿದೆ. ರೈತರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಿಂಘು ಬಾರ್ಡರ್ ಗಿಂತ 2ಕಿ.ಮಿ ದೂರದಲ್ಲಿ ಘಟನೆ ನಡೆದಿದೆ. “ಸರಕಾರ ರೈತರ ವಿರುದ್ಧ ನಡೆಸುತ್ತಿರುವ ಅನ್ಯಾಯದ ವಿರುದ್ಧದ ಆಕ್ರೋಶವನ್ನು ಈ ರೀತಿ ಹೊರಹಾಕುತ್ತಿದ್ದೇನೆ” ಎಂದು ಬರೆದಿಟ್ಟು ಆತ್ಮಹತ್ಯೆಗೈದಿದ್ದಾರೆಂದು ndtv.com ವರದಿ ಮಾಡಿದೆ.

“ನ್ಯಾಯಕ್ಕಾಗಿ ಹೋರಾಡುತ್ತಿರುವ ರೈತರ ನೋವು ನನಗೆ ಅರ್ಥವಾಗುತ್ತಿದೆ. ಸರಕಾರ ರೈತರಿಗೆ ಅನ್ಯಾಯ ಮಾಡುತ್ತಿದ್ದು,  ನಾನು ಅವರ ನೋವನ್ನು ಹಂಚಿಕೊಳ್ಳುತ್ತಿದ್ದೇನೆ. ಅನ್ಯಾಯವು ಪಾಪಕರ್ಮವಾಗಿದೆ. ಹಾಗೆಯೇ, ಅನ್ಯಾಯವನ್ನು ಸಹಿಸಿಕೊಳ್ಳುವುದು ಕೂಡಾ ಪಾಪವಾಗಿದೆ. ರೈತರನ್ನು ಬೆಂಬಲಿಸುವ ಸಲುವಾಗಿ ಕೆಲವರು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ. ಆದರೆ ನಾನು, ನನ್ನ ಜೀವವನ್ನೇ ತ್ಯಾಗ ಮಾಡುತ್ತಿದ್ದೇನೆ” ಎಂದು ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಬರೆದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕೂಡಲೇ ಅವರನ್ನು ಪಾಣಿಪತ್ ನಲ್ಲಿರುವ ಪಾರ್ಕ್ ಆಸ್ಪತ್ರೆಗೆ ಕರೆದೊಯ್ದರೂ ಕೂಡಾ, ಅದಾಗಲೇ ಅವರು ಮೃತಪಟ್ಟಿದ್ದರು. ಅವರ ಮೃತದೇಹವನ್ನು ಅವರು ವಾಸಿಸುತ್ತಿದ್ದ ಕರ್ನಾಲ್ ಎಂಬ ಪ್ರದೇಶಕ್ಕೆ ಕೊಂಡೊಯ್ಯಲಾಗಿದೆ ಎಂದು ಸೋನಿಪತ್ ನ ಪ್ರಧಾನ ಪೊಲೀಸ್ ಅಧೀಕ್ಷಕ ಶ್ಯಾಮ್ ಲಾಲ್ ಪೂನಿಯಾ ತಿಳಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿದ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ, “ ಸಂತ ಬಾಬಾ ರಾಮ್ ಸಿಂಗ್ ರೈತರ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ನಾನು ಸಂತಾಪ ವ್ಯಕ್ತಪಡಿಸುತ್ತಿದ್ದೇನೆ. ಹಲವಾರು ಮಂದಿ ರೈತರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಮೋದಿ ಸರಕಾರವು ಕ್ರೂರತೆಯ ಪರಮಾವಧಿ ಮೀರಿದೆ. ಶೀಘ್ರವೇ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಿರಿ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News