ಇಡೀ ರಾತ್ರಿ ಹುಡುಕಾಡಿದರೂ ವಧುವಿನ ಮನೆ ಸಿಗದೆ ಕಂಗಾಲಾದ ಮದುಮಗನ ಕುಟುಂಬ!

Update: 2020-12-17 06:35 GMT

ವಾರಾಣಸಿ: ಮದುಮಗನ ಕುಟುಂಬದವರು ದಿಬ್ಬಣದೊಂದಿಗೆ ವಿವಾಹ ಸಮಾರಂಭಕ್ಕಾಗಿ ಅಝಂಗಢದಿಂದ ಮೌ ಎಂಬ ಪ್ರದೇಶಕ್ಕೆ ತೆರಳಿದ್ದಾರೆ. ಆದರೆ, ಅಚ್ಚರಿಯ ವಿಚಾರವೆಂದರೆ ಅವರಿಗೆ ಮದುಮಗಳ ವಿಳಾಸವೇ ಸಿಗಲೇ ಇಲ್ಲ. ವಧು ಎಲ್ಲಿದ್ದಾಳೆಂದೂ ಗೊತ್ತಾಗಿಲ್ಲ. ನಡುಗುವ ಚಳಿಯಲ್ಲೂ ಇಡೀ ರಾತ್ರಿ ವರ ಹಾಗೂ ಆತನ ಸಂಬಂಧಿಕರು ವಧುವಿನ ನಿವಾಸಕ್ಕಾಗಿ ಬೀದಿ ಬೀದಿ ಹುಡುಕಾಡಿದರೂ ವಿಳಾಸ ಸಿಗದೆ ಅಂತಿಮವಾಗಿ ತಮ್ಮ ಮನೆಗೆ ವಾಪಸಾಗಿದ್ದಾರೆ. ಮದುವೆ ಡಿಸೆಂಬರ್ 10 ರಂದು ನಿಗದಿಯಾಗಿತ್ತು.

ಮದುಮಗನ ಕುಟುಂಬದವರು ಮದುವೆಗೆ ಮಧ್ಯವರ್ತಿಯಾಗಿದ್ದ ಮಹಿಳೆಯೊಬ್ಬರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಆಕೆಯನ್ನು ಬಂಧಿಸಿ ಶನಿವಾರ ರಾತ್ರಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. ಈ ವಿಚಾರವು ಕೊಟ್ವಾಲಿ ಪೊಲೀಸ್ ಠಾಣೆಗೆ ತಲುಪಿತ್ತು. ವಧು ಹಾಗೂ ಆಕೆಯ ಕುಟುಂಬ ಸದಸ್ಯರು ನನಗೆ ವಂಚಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ವರನ ಕುಟುಂಬದವರು ಮದುವೆಯ ಪ್ರಸ್ತಾವ ತಂದಿದ್ದ ಮಹಿಳೆಯ ಮೇಲೆ ಗಂಭೀರ ಆರೋಪ ಹೊರಿಸಿದ್ದಾರೆ. ವಿವಾದವನ್ನು ಬಗೆಹರಿಸಿಕೊಳ್ಳಲು ನಾವು ಅವಕಾಶವನ್ನು ನೀಡಿದ್ದೇವೆ. ಶನಿವಾರ ತಡರಾತ್ರಿ ಸಮಸ್ಯೆ ಬಗೆಹರಿದಿದೆ. ಮಹಿಳೆಯ ವಿರುದ್ಧ ಎಫ್ಐಆರ್ ದಾಖಲಿಸದಿರಲು ವರನ ಕುಟುಂಬದವರು ನಿರ್ಧರಿಸಿದ್ದಾರೆ ಎಂದು ಹಿರಿಯ ಎಸ್ ಐ ಶಂಶೇರ್ ಯಾದವ್ ಹೇಳಿದ್ದಾರೆ.

ವರನ ಕುಟುಂಬವು ಚತ್ವಾರ ಪ್ರದೇಶದಲ್ಲಿ ಮಧ್ಯವರ್ತಿ ಮಹಿಳೆಯನ್ನು ಸಂಪರ್ಕಿಸಿದ್ದರು. ಮಹಿಳೆಯು ವೌನಲ್ಲಿ ಒಂದು ಹುಡುಗಿ ಇರುವುದಾಗಿ ಹೇಳಿದ್ದಳು. ಎರಡೂ ಕುಟುಂಬಗಳು ಮದುವೆಗಾಗಿ ಒಪ್ಪಿಕೊಂಡಿದ್ದವು. ಮದುವೆಯ ದಿನಾಂಕ ನಿಗದಿಪಡಿಸಿದಾಗ ವರನ ಕುಟುಂಬದವರು ವಧುವಿನ ಮನೆಗೆ ಭೇಟಿ ನೀಡಿರಲಿಲ್ಲ. ಮದುವೆಗೆ ದಿನ ನಿಗದಿಗೊಳಿಸಿದ್ದಾಗ ವರನ ಕಡೆಯವರು ವಧುವಿನ ಕುಟುಂಬಕ್ಕೆ ಮದುವೆಯ ಬ್ಯಾಂಡ್ ಹಾಗೂ ಲೈಟ್ಗಳ ಕಾಯ್ದಿರಿಸಲು 20,000 ರೂ. ನೀಡಿತ್ತು ಎಂದು ವರನ ತಾಯಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News