×
Ad

ಕಫೀಲ್ ಖಾನ್ ಬಂಧನ ರದ್ದುಪಡಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪು ಎತ್ತಿ ಹಿಡಿದ ಸುಪ್ರೀಂ

Update: 2020-12-17 13:04 IST

ಹೊಸದಿಲ್ಲಿ:  ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ ಎಸ್‌ಎ)ಅಡಿಯಲ್ಲಿ ಡಾ. ಕಫೀಲ್ ಖಾನ್ ಬಂಧನದ ಆದೇಶವನ್ನು ರದ್ದುಪಡಿಸಿರುವ ಅಲಹಾಬಾದ್ ಹೈಕೋರ್ಟಿನ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ ಎತ್ತಿಹಿಡಿದಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಉತ್ತರಪ್ರದೇಶ ಸರಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಸೆಪ್ಟಂಬರ್ 1 ರಂದು ಹೈಕೋರ್ಟ್ ನೀಡಿರುವ ಆದೇಶದಲ್ಲಿ ಖಾನ್ ಬಂಧನ ಆದೇಶವನ್ನು ರದ್ದುಪಡಿಸಿದ್ದು, ಈ ಆದೇಶದಲ್ಲಿ ಮಧ್ಯಪ್ರವೇಶಿಸುವುದಕ್ಕೆ ಯಾವುದೇ ಕಾರಣವಿಲ್ಲ ಎಂದು ಭಾರತದ ಮುಖ್ಯ ನ್ಯಾಯಾಧೀಶ ಎಸ್‌ಎ ಬೋಬ್ಡೆ ಹಾಗೂ ಜಸ್ಟಿಸ್‌ಗಳಾದ ಎಎಸ್ ಬೋಪಣ್ಣ ಹಾಗೂ ವಿ.ರಾಮಸುಬ್ರಹ್ಮಣ್ಯಂ ಅವರಿದ್ದ ಮೂವರು ಸದಸ್ಯರ ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.

ಮಧ್ಯಪ್ರವೇಶಿಸಲು ನಮಗೆ ಯಾವುದೇ ಕಾರಣ ಕಾಣುತ್ತಿಲ್ಲ ಎಂದು ತಿಳಿಸಿದ ಸುಪ್ರೀಂಕೋರ್ಟ್ ಉತ್ತರಪ್ರದೇಶ ಸರಕಾರ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿತು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದಿರುವ ಪ್ರತಿಭಟನೆಯ ವೇಳೆ ಅಲಿಗಢ ಮುಸ್ಲಿಂ ಯುನಿವರ್ಸಿಟಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಡಾ. ಕಫೀಲ್ ಖಾನ್‌ರನ್ನು ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಿ ಮಥುರಾ ಜೈಲಿನಲ್ಲಿಡಲಾಗಿತ್ತು.

 ಸೆಪ್ಟಂಬರ್‌ನಲ್ಲಿ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಗೋವಿಂದ್ ಮಾಥುರ್ ಹಾಗೂ ಜಸ್ಟಿಸ್ ಸುಮಿತ್ರಾ ದಯಾಳ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಡಾ. ಖಾನ್ ಪರ ಅವರ ತಾಯಿ ರಿಟ್ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಲ್ಲದೆ, ಖಾನ್ ಬಂಧನವನ್ನು ರದ್ದುಪಡಿಸಿತ್ತು.

ಖಾನ್ ತನ್ನ ಭಾಷಣದಲ್ಲಿ ಹಿಂಸೆ ಹಾಗೂ ದ್ವೇಷಿಸುವಂತೆ ಕರೆ ನೀಡಿರಲಿಲ್ಲ. ಅವರು ರಾಷ್ಟ್ರೀಯ ಸಮಗ್ರತೆ ಹಾಗೂ ಏಕತೆಗಾಗಿ ಕರೆ ನೀಡಿದ್ದರು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News