×
Ad

ಸಾಲ ತೀರಿಸಲಾಗದೆ ಆತ್ಮಹತ್ಯೆಗೈದ ರೈತರ ಪತ್ನಿಯರು, ತಾಯಂದಿರು ರೈತರ ಪ್ರತಿಭಟನೆಯಲ್ಲಿ ಭಾಗಿ

Update: 2020-12-17 14:59 IST

ಹೊಸದಿಲ್ಲಿ,ಡಿ.17: ಕೃಷಿಗಾಗಿ ಮಾಡಿದ್ದ ಸಾಲವನ್ನು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರು ಮತ್ತು ತಾಯಂದಿರು ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ಮಂದಿ ಮಹಿಳೆಯರು ದೆಹಲಿ ಸಮೀಪದ ಟಿಕ್ರಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ‘thequint.com ವರದಿ ಮಾಡಿದೆ.

ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ತಮ್ಮವರ ಭಾವಚಿತ್ರಗಳನ್ನು ಹಿಡಿದುಕೊಂಡು ಭಾಗವಹಿಸಿದ ಮಹಿಳೆಯರು ನೂತನ ಕೃಷಿ ಮಸೂದೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಅವರಿಗೆಂದೇ ಭಾರತೀಯ ಕಿಸಾನ್ ಯೂನಿಯನ್ ಪ್ರತ್ಯೇಕ ವೇದಿಕೆಯನ್ನು ಸಿದ್ಧಪಡಿಸಿತ್ತು.

ದಿಲ್ಲಿ-ಹರ್ಯಾಣ ಸಮೀಪದ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳೆಯೋರ್ವರು ಮಾತನಾಡಿ, ೀ ನೂತನ ಮಸೂದೆಯಿಂದ ಇನ್ನೂ ಹಲವು ರೈತರು ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆಗಳಿವೆ ಎಂದು ಹೇಳಿದರು. “ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಂದಿನಿಂದ ನಮ್ಮ ಬದುಕು ಮುಗಿದಂತಾಗಿದೆ.  ಇಂದಿಗೂ ನಮಗೆ ಆ ನಷ್ಟದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ದಿನಕಳೆದಂತೆ ಪರಿಸ್ಥಿತಿ ಶೋಚನೀಯವಾಗತೊಡಗಿದೆ. ನಾವು ನಮ್ಮ 2 ಎಕರೆ ಜಮೀನನ್ನೂ ಮಾರಿದೆವು. ನನ್ನ 16 ವರ್ಷದ ಪುತ್ರ ಇನ್ಯಾರದೋ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಇಂದಿಗೂ 4 ಲಕ್ಷ ರೂ. ಸಾಲದ ಹೊರೆ ನಮ್ಮ ತಲೆಯ ಮೇಲಿದೆ ಎಂದು 56 ವರ್ಷದ ಜಸ್ಬೀರ್ ಕೌರ್ ಹೇಳಿದ್ದಾಗಿ ‘hindusthantimes.com ವರದಿ ಮಾಡಿದೆ.

ಇನ್ನು PTI ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪಟಿಯಾಲ ನಿವಾಸಿ 65 ವರ್ಷದ ಮೊಹಿಂದರ್ ಕೌರ್, “ನನ್ನ 19 ವರ್ಷದ ಮೊಮ್ಮಗ 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ನಮ್ಮಿಂದ ಸಾಧ್ಯವಾಗಲಿಲ್ಲ ಎಂಬುವುದಾಗಿತ್ತು ಆತನ ನೋವು” ಎಂದು ಅವರು ದುಃಖ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ಕೇವಲ 2018ರಲ್ಲಿ 10,350 ಮಂದಿ ರೈತರು ಮತ್ತು ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ದೇಶದಲ್ಲೇ ನಡೆಯುವ ಆತ್ಮಹತ್ಯೆಯ ಪ್ರಮಾಣದ 8% ರಷ್ಟಾಗುತ್ತದೆ ಎಂದು ರಾಷ್ಟ್ರೀಯ ಅಪರಾಧ ಬ್ಯೂರೋ ದಾಖಲೆಯು ತಿಳಿಸುತ್ತದೆ. ಕೇವಲ ಪಂಜಾಬ್ ರಾಜ್ಯವೊಂದರಲ್ಲೇ 2006ರಲ್ಲಿ 50,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News