×
Ad

ಕೃಷಿ ಕಾನೂನುಗಳ ಅನುಷ್ಠಾನವನ್ನು ತಡೆಹಿಡಿಯಿರಿ: ಸುಪ್ರೀಂಕೋರ್ಟ್ ಸಲಹೆ

Update: 2020-12-17 15:10 IST

ಹೊಸದಿಲ್ಲಿ, ಡಿ.17: ದಿಲ್ಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರಿಯಬೇಕು. ರೈತರಿಗೆ ಪ್ರತಿಭಟಿಸುವ ಹಕ್ಕು ಇದೆ. ಆದರೆ ರಾಷ್ಟ್ರೀಯ ರಾಜಧಾನಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಮಾಡಬಾರದು ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದ್ದು, ನ್ಯಾಯಾಲಯ ಅಂತಿಮ ನಿರ್ಧಾರ ಪ್ರಕಟಿಸುವವರೆಗೆ ಕೃಷಿ ಕಾಯ್ದೆಯನ್ನು ಜಾರಿಗೊಳಿಸಬಾರದು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಕೃಷಿ ಕಾಯ್ದೆಯ ಪರ ಮತ್ತು ವಿರೋಧವಾಗಿ ಸಲ್ಲಿಸಿರುವ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ, ಕಾಯ್ದೆಯ ವಿರುದ್ಧ ಪ್ರತಿಭಟಿಸುವ ಮೂಲಭೂತ ಹಕ್ಕನ್ನು ನಾವು ಪರಿಗಣಿಸುತ್ತೇವೆ. ಅದನ್ನು ಸಮತೋಲನಗೊಳಿಸುವ ಅಥವಾ ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ. ಆದರೆ ಇದು ಯಾವುದೇ ಜೀವಹಾನಿ ಅಥವಾ ಆಸ್ತಿನಷ್ಟಕ್ಕೆ ಕಾರಣವಾಗಬಾರದು ಎಂದು ಹೇಳಿದೆ.

ಅರ್ಜಿಗಳನ್ನು ರಜಾಕಾಲದ ಪೀಠಕ್ಕೆ ವರ್ಗಾಯಿಸಲಾಗುವುದು. ವಿಚಾರಣೆ ಪೂರ್ಣಗೊಂಡು ನಿರ್ಧಾರ ಪ್ರಕಟಿಸುವವರೆಗೆ ಕೇಂದ್ರ ಸರಕಾರ ನೂತನ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಬಾರದು . ಶಾಂತ ರೀತಿಯಿಂದ ಪ್ರತಿಭಟನೆ ಮುಂದುವರಿಯಲಿ. ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಪ್ರಯತ್ನಿಸಬಾರದು ಎಂದು ನ್ಯಾಯಪೀಠ ಹೇಳಿದೆ.

ದಿಲ್ಲಿ ಗಡಿಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ತೆರವುಗೊಳಿಸುವಂತೆ ಕೋರಿದ್ದ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ‘ಪ್ರತಿಭಟನೆಗಳು ಕೇವಲ ಪ್ರತಿಭಟನೆಯಾಗಬಾರದು, ದೃಷ್ಟಿಕೋನವನ್ನು ನಿರೂಪಿಸಬೇಕು’ ಎಂದು ಹೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಾವು ಹೇಳುತ್ತಿರುವುದೂ ಇದನ್ನೇ. ಪ್ರತಿಭಟನೆಗೆ ಒಂದು ವಿಷಯವಿರಬೇಕು ಮತ್ತು ಪ್ರತಿಭಟನೆ ನಡೆಸುವವರ ಅಹವಾಲನ್ನು ಆಲಿಸಬೇಕು. ಸಮಸ್ಯೆ ಸೃಷ್ಟಿಸಿದವರು ಉತ್ತರಿಸಲು ಅವಕಾಶ ನೀಡಬೇಕು ಎಂದು ಹೇಳಿತು.

‘ಸರಕಾರ ಹಲವು ತಿದ್ದುಪಡಿಗಳನ್ನು ಮಾಡಿರುವುದರಿಂದ ಮೂಲ ಕಾನೂನು ಗುರುತಿಸಲಾಗದ ಸ್ಥಿತಿಯಲ್ಲಿದೆ. ಹೊಸ ಕಾಯ್ದೆ ಸ್ವೀಕಾರಾರ್ಹವಲ್ಲ ಎಂದು ರೈತರು ಹೇಳುತ್ತಿದ್ದಾರೆ. ಆದ್ದರಿಂದ ಹೊಸ ಕಾನೂನನ್ನು ರೂಪಿಸಲಿ ಮತ್ತು ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಲಿ’ ಎಂದು ದಿಲ್ಲಿ ಸರಕಾರದ ಪ್ರತಿನಿಧಿ, ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೇಳಿದರು.

ಈಗ ರೈತರ ಪ್ರತಿಭಟನೆ ಮತ್ತು ಮುಕ್ತ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದ ಅರ್ಜಿಗಳ ಬಗ್ಗೆ ಕಲಾಪ ನಡೆಯುತ್ತಿದೆ. ಕಾನೂನಿನ ಸಿಂಧುತ್ವದ ಕುರಿತ ಕಲಾಪ ಆ ಬಳಿಕ ನಡೆಯುತ್ತದೆ. ಆಗ ನಿಮ್ಮ (ಚಿದಂಬರಂ) ವಾದವನ್ನು ಮಂಡಿಸಬಹುದು ಎಂದು ನ್ಯಾಯಾಲಯ ಹೇಳಿತು. ರೈತರ ಸ್ಥಿತಿಗತಿಯ ಅರಿವು ನಮಗಿದೆ ಮತ್ತು ಅವರ ಬಗ್ಗೆ ಅನುಕಂಪವಿದೆ. ಆದರೆ ಈಗ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬದಲಾವಣೆಯ ಅಗತ್ಯವಿದೆ. ರಸ್ತೆ ಸಂಚಾರ ತಡೆಗಟ್ಟುವ ನಿರ್ಧಾರದಿಂದ ದಿಲ್ಲಿಯ ಜನತೆ ಉಪವಾಸ ಬೀಳಬಹುದು. ನೀವು ಸುಮ್ಮನೆ ವರ್ಷಗಟ್ಟಲೆ ಧರಣಿ ಕುಳಿತರೆ ಸಮಸ್ಯೆ ಪರಿಹಾರವಾಗದು. ಯಾರಾರದೊಬ್ಬರ ಜತೆ ಮಾತನಾಡಿ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಭಾರತೀಯ ಕಿಸಾನ್ ಯೂನಿಯನ್‌ನ ಸದಸ್ಯರನ್ನುದ್ದೇಶಿಸಿ ನ್ಯಾಯಾಲಯ ಹೇಳಿತು.

ಸ್ವತಂತ್ರ ಸಮಿತಿಗೆ ಈ ಪ್ರಕರಣವನ್ನು ಹಸ್ತಾಂತರಿಸಬೇಕು. ಕೃಷಿಯ ಬಗ್ಗೆ ಪರಿಜ್ಞಾನ ಹೊಂದಿರುವ ಸಮಿತಿಯ ಸದಸ್ಯರು ಸರಕಾರ ಮತ್ತು ರೈತರ ವಾದವನ್ನು ಆಲಿಸಿ, ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎ.ಸ್‌ಎ. ಬೋಬ್ಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News