ಕಾಮಿಡಿಯನ್ ಕುನಾಲ್ ಕಾಮ್ರಾಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಕುರಿತು ನಾಳೆ ಸುಪ್ರೀಂ ಆದೇಶ
ಹೊಸದಿಲ್ಲಿ,ಡಿ.17: ಸುಪ್ರೀಂ ಕೋರ್ಟ್ ಹಾಗೂ ನ್ಯಾಯಾಧೀಶರುಗಳ ಕುರಿತಂತೆ ‘ನಿಂದನಾತ್ಮಕ’ ಟ್ವೀಟ್ ಮಾಡಿದ ಆರೋಪ ಎದುರಿಸುತ್ತಿರುವ ಕಾಮಿಡಿಯನ್ ಕುನಾಲ್ ಕಾಮ್ರಾ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಬೇಕೇ ಅಥವಾ ಬೇಡವೇ ಎಂಬ ಕುರಿತಾದ ಆದೇಶವನ್ನು ಸುಪ್ರೀಂ ಕೋರ್ಟ್ ಕಾದಿರಿಸಿದೆ. ನಾಳೆ ಈ ಕುರಿತ ಆದೇಶ ಹೊರಬೀಳುವ ನಿರೀಕ್ಷೆಯಿದೆ.
ಇಂದು ವಿಚಾರಣೆ ನಡೆದಾಗ, ಅಭ್ಯುದಯ್ ಮಿಶ್ರಾ, ಸ್ಕಂದ್ ಬಾಜಪೇಯಿ ಹಾಗೂ ಶ್ರೀರಂಗ್ ಕಟ್ನೇಶ್ವರ್ ಅವರು ಸಲ್ಲಿಸಿದ್ದ ಅಪೀಲುಗಳನ್ನು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಶ್ ರೆಡ್ಡಿ ಹಾಗೂ ಎಂ.ಆರ್ ಶಾ ಅವರ ಪೀಠ ಪರಿಶೀಲಿಸಿತು.
ಅರ್ಜಿದಾರರಲ್ಲೊಬ್ಬರ ವಕೀಲರು ಕಾಮ್ರಾ ಅವರ ಟ್ವೀಟನ್ನು ಉಲ್ಲೇಖಿಸಲು ಯತ್ನಿಸಿದರೂ ಅದನ್ನು ಈಗಾಗಲೇ ಓದಲಾಗಿದೆ ಮತ್ತೆ ಹೇಳುವ ಅಗತ್ಯವಿಲ್ಲ ಎಂದು ಪೀಠ ಹೇಳಿತು.
ನವೆಂಬರ್ 12ರಂದು ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ಕಾಮ್ರಾ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅರ್ಜಿದಾರರಿಗೆ ಅನುಮತಿ ನೀಡಿದ್ದರು.