ಅಮೆರಿಕದ ಹಣಕಾಸು ಇಲಾಖೆಯ ಕರೆನ್ಸಿ ಹಸ್ತಕ್ಷೇಪ ನಿಗಾ ಪಟ್ಟಿಯಲ್ಲಿ ಮತ್ತೆ ಸೇರಿದ ಭಾರತ
ಹೊಸದಿಲ್ಲಿ, ಡಿ.17: ತನ್ನ ಪ್ರಮುಖ ವ್ಯಾಪಾರ ಪಾಲುದಾರರ ಸ್ಥೂಲ ಆರ್ಥಿಕತೆ ಮತ್ತು ವಿದೇಶಿ ವಿನಿಮಯ ನೀತಿಗಳ ಕುರಿತು ಅಮೆರಿಕದ ಹಣಕಾಸು ಇಲಾಖೆಯ ಅರ್ಧವಾರ್ಷಿಕ ವರದಿಯು ಕರೆನ್ಸಿ ಹಸ್ತಕ್ಷೇಪಕ್ಕಾಗಿ ನಿಗಾ ಇರಿಸಲಾಗುವ ದೇಶಗಳ ಪಟ್ಟಿಯಲ್ಲಿ ಭಾರತವನ್ನು ಸೇರಿಸಿದೆ. ವರ್ಷದ ಉತ್ತರಾರ್ಧದಲ್ಲಿ ಹೂಡಿಕೆಗಳ ಹರಿವು ಹೆಚ್ಚಾದ್ದರಿಂದ ಆರ್‌ಬಿಐ ವಿದೇಶಿ ಕರೆನ್ಸಿಗಳ ಖರೀದಿಯನ್ನು ಹೆಚ್ಚಿಸಿದ್ದ ಹಿನ್ನೆಲೆಯಲ್ಲಿ ಈ ಪಟ್ಟಿಯಲ್ಲಿ ಭಾರತವನ್ನು ಸೇರಿಸಲಾಗಿದೆ.
ಚೀನಾ, ಜಪಾನ್, ಜರ್ಮನಿ, ಇಟಲಿ, ಸಿಂಗಾಪುರ, ಮಲೇಷ್ಯಾ, ತೈವಾನ್, ಥೈಲಂಡ್ ಮತ್ತು ಭಾರತ ಈ ಪಟ್ಟಿಯಲ್ಲಿರುವ ರಾಷ್ಟ್ರಗಳಾಗಿವೆ. 2018ರಲ್ಲಿ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದ ಭಾರತವನ್ನು 2019ರಲ್ಲಿ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಕರೆನ್ಸಿ ಹಸ್ತಕ್ಷೇಪವನ್ನು ನಿರ್ಧರಿಸಲು ಅಮೆರಿಕದ ಹಣಕಾಸು ಇಲಾಖೆಯು ಮೂರು ಮಾನದಂಡಗಳನ್ನು ಬಳಸುತ್ತದೆ:
► ಅಮೆರಿಕದೊಂದಿಗೆ ದ್ವಿಪಕ್ಷೀಯ ವ್ಯಾಪಾರದಲ್ಲಿ 20 ಶತಕೋಟಿ ಡಾ.ಗೂ ಹೆಚ್ಚಿನ ಆಧಿಕ್ಯ
► ಜಿಡಿಪಿಯ ಕನಿಷ್ಠ ಶೇ.3ರಷ್ಟು ಚಾಲ್ತಿ ಖಾತೆಯಲ್ಲಿ ಮಿಗತೆ
► 12 ತಿಂಗಳ ಅವಧಿಯಲ್ಲಿ ಜಿಡಿಪಿಯ ಶೇ.2ರಷ್ಟು ವಿದೇಶಿ ಕರೆನ್ಸಿಯ ನಿವ್ವಳ ಖರೀದಿ
ಭಾರತವು ಮೊದಲ ಮತ್ತು ಮೂರನೇ ಮಾನದಂಡಗಳನ್ನು ಉಲ್ಲಂಘಿಸಿದೆ. ಎರಡನೇ ಮಾನದಂಡ ಕುರಿತಂತೆ ನಾಲ್ಕು ತ್ರೈಮಾಸಿಕಗಳ ಆಧಾರದಲ್ಲಿ ದೇಶದ ಚಾಲ್ತಿ ಖಾತೆಯಲ್ಲಿ ಹೆಚ್ಚುವರಿ ನಿಧಿಯು ಆರಂಭಿಕ ಮಟ್ಟಕ್ಕಿಂತ ಕೆಳಗಿದೆ.
ಭಾರತವು ಹಲವಾರು ವರ್ಷಗಳಿಂದ ಅಮೆರಿಕದೊಂದಿಗೆ ಗಣನೀಯ ದ್ವಿಪಕ್ಷೀಯ ವ್ಯಾಪಾರ ಆಧಿಕ್ಯವನ್ನು ಕಾಯ್ದುಕೊಂಡಿದೆ. ಜೂನ್ 2020ರವರೆಗಿನ ನಾಲ್ಕು ತ್ರೈಮಾಸಿಕಗಳಲ್ಲಿ ಇದು ಒಟ್ಟು 22 ಶತಕೋಟಿ ಡಾ.ಗಳಷ್ಟಿದೆ. ಭಾರತದ ಮೊದಲ ನಾಲ್ಕು ತ್ರೈಮಾಸಿಕಗಳ ಚಾಲ್ತಿ ಖಾತೆ ಮಿಗತೆಯು 2004ರಿಂದ 2020 ಜೂನ್‌ವರೆಗೆ ಜಿಡಿಪಿಯ ಶೇ.0.04ರಲ್ಲಿಯೇ ಉಳಿದುಕೊಂಡಿದೆ ಎಂದು ವರದಿಯು ತಿಳಿಸಿದೆ.
ವರದಿಯಲ್ಲಿ ತಿಳಿಸಿರುವಂತೆ ಭಾರತದಿಂದ ವಿದೇಶಿ ಕರೆನ್ಸಿಯ ನಿವ್ವಳ ಖರೀದಿಯು ಜಿಡಿಪಿಯ ಶೇ.2.4ರಷ್ಟಿದೆ. ಕರೆನ್ಸಿ ಹಸ್ತಕ್ಷೇಪ ಕುರಿತು ಮಾಹಿತಿಗಳನ್ನು ಪ್ರಕಟಿಸುವಲ್ಲಿ ಆರ್‌ಬಿಐನ ಪ್ರಾಮಾಣಿಕತೆಯನ್ನು ವರದಿಯು ಒಪ್ಪಿಕೊಂಡಿದ್ದರೂ ರೂಪಾಯಿಯು ಆರ್ಥಿಕ ಮೂಲತತ್ವಗಳ ಆಧಾರದಲ್ಲಿ ಇತರ ಕರೆನ್ಸಿಗಳೊಂದಿಗೆ ಹೊಂದಿಕೊಳ್ಳಲು ಅವಕಾಶ ನೀಡುವಂತೆ ಆರ್‌ಬಿಐಗೆ ಸೂಚಿಸಿದೆ.
ಜಾಗತಿಕ ನಗದು ಹರಿವಿನಲ್ಲಿ ಹೆಚ್ಚಳವು ಭಾರತದಂತಹ ಉದಯೋನ್ಮುಖ ಆರ್ಥಿಕತೆಗಳಲ್ಲಿ ವಿದೇಶಿ ಹೂಡಿಕೆಗಳನ್ನು ಹೆಚ್ಚಿಸಿದೆ. ನ್ಯಾಷನಲ್ ಸೆಕ್ಯುರಿಟಿ ಡಿಪಾಸಿಟರಿ ಲಿ.ನಲ್ಲಿ ಲಭ್ಯ ಮಾಹಿತಿಗಳಂತೆ ಈ ವರ್ಷ ಈವರೆಗೆ 80,783 ಕೋ.ರೂ.ಗಳ ಪೋರ್ಟ್‌ಫೋಲಿಯೊ ಹೂಡಿಕೆ ಭಾರತಕ್ಕೆ ಹರಿದುಬಂದಿದೆ. ವಿದೇಶಿ ನೇರ ಹೂಡಿಕೆ ಪ್ರಮಾಣವೂ ಏರಿಕೆಯಾಗಿದೆ.
ರೂಪಾಯಿಯ ದಿಢೀರ್ ಮೌಲ್ಯವರ್ಧನೆಯನ್ನು ತಡೆಯಲು ಆರ್‌ಬಿಐ ದೇಶಕ್ಕೆ ಹರಿದುಬರುವ ವಿದೇಶಿ ವಿನಿಮಯದಲ್ಲಿ ದೊಡ್ಡ ಪಾಲನ್ನು ಖರೀದಿಸುತ್ತದೆ. ಎ.3ರಿಂದೀಚಿಗೆ ವಿದೇಶಿ ವಿನಿಮಯ ಮೀಸಲು ಪ್ರಮಾಣವು 475.6 ಶತಕೋಟಿ ಡಾ.ಗಳಿಂದ 579 ಶತಕೋಟಿ ಡಾ.ಗಳಿಗೆ ಏರಿದೆ. ಈ ವಿದೇಶಿ ವಿನಿಮಯಗಳ ಖರೀದಿಯು ದೇಶಿಯ ಮಾರುಕಟ್ಟೆಯಲ್ಲಿ ನಗದು ಆಧಿಕ್ಯಕ್ಕೆ ಕಾರಣವಾಗಿದೆ ಮತ್ತು ರೂಪಾಯಿಯ ಇನ್ನಷ್ಟು ವೌಲ್ಯವರ್ಧನೆಗೆ ಆರ್‌ಬಿಐ ಅನುಮತಿಸಬೇಕೇ ಎಂದು ವಿಶ್ಲೇಷಕರು ಪ್ರಶ್ನಿಸುವಂತೆ ಮಾಡಿದೆ.
ಭಾರತವನ್ನು ಕರೆನ್ಸಿ ಹಸ್ತಕ್ಷೇಪ ನಿಗಾ ಪಟ್ಟಿಯಲ್ಲಿ ಮರಳಿ ಸೇರಿಸುವ ಅಮೆರಿಕ ಹಣಕಾಸು ಇಲಾಖೆಯ ನಿರ್ಧಾರವು ವಿದೇಶಿ ವಿನಿಮಯ ಮಧ್ಯಪ್ರವೇಶದ ಬಗ್ಗೆ ಆರ್‌ಬಿಐ ಕೊಂಚ ಎಚ್ಚರಿಕೆಯಿಂದಿರುವಂತೆ ಮಾಡಲಿದೆ ಎಂದು ಎಮ್ಕೆ ಗ್ಲೋಬಲ್‌ನ ಅರ್ಥಶಾಸ್ತ್ರಜ್ಞೆ ಮಾಧವಿ ಅರೋರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.