ಫೈಝರ್ ಕೋವಿಡ್ ಲಸಿಕೆ ಪಡೆದ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ತೀವ್ರ ಅಡ್ಡ ಪರಿಣಾಮ
ನ್ಯೂಯಾರ್ಕ್,ಡಿ.17: ಫೈಝರ್ ಕಂಪೆನಿ ಅಭಿವೃದ್ಧಿ ಪಡಿಸಿರುವ ಕೋವಿಡ್ ಲಸಿಕೆ ನೀಡಿದ ವೇಳೆ ಅಮೆರಿಕಾದ ಅಲಾಸ್ಕಾದ ಆಸ್ಪತ್ರೆಯೊಂದರ ಇಬ್ಬರು ಸಿಬ್ಬಂದಿಗೆ ತೀವ್ರ ಅಡ್ಡ ಪರಿಣಾಮ ಉಂಟಾದ ಘಟನೆ ನಡೆದಿದೆ. ಅವರಿಗೆ ತಕ್ಷಣ ಚಿಕಿತ್ಸೆ ನೀಡಿದ್ದು, ಪ್ರಾಣಾಪಾಯವೇನೂ ಉಂಟಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ ಈ ಬೆಳವಣಿಗೆ ಲಸಿಕೆ ನೀಡಿಕೆ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವುದಿಲ್ಲ, ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಮಾಹಿತಿ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಒಬ್ಬರು ಮಧ್ಯ ವಯಸ್ಸಿನ ಮಹಿಳೆಗೆ ಈ ಹಿಂದೆ ಅಲರ್ಜಿಯ ಸಮಸ್ಯೆಯಿಲ್ಲದೇ ಇದ್ದರೂ ಜುನೀಯು ಎಂಬಲ್ಲಿನ ಬಾರ್ಟ್‍ಲೆಟ್ ರೀಜನಲ್ ಹಾಸ್ಪಿಟಲ್‍ನಲ್ಲಿ ಲಸಿಕೆ ಪಡೆದ ನಂತರ ಆಕೆಯ ಮುಖ ಹಾಗೂ ಮೈಮೇಲೆಲ್ಲಾ ಕೆಂಪು ಗುಳ್ಳೆಗಳು ಕಾಣಿಸಿಕೊಂಡಿತ್ತು. ಮಾತ್ರವಲ್ಲದೇ ಹೃದಯ ಬಡಿತವೂ ಹೆಚ್ಚಾಗಿತ್ತು. ಆಕೆಗೆ ತಕ್ಷಣ ಅದಕ್ಕೆ ಚಿಕಿತ್ಸೆ ನೀಡಲಾಯಿತಾದರೂ ಮತ್ತೆ ಅದೇ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಟೆರಾಯ್ಡ್ ನೀಡಲಾಗಿತ್ತು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕೊನೆಗೆ ಪರಿಸ್ಥಿತಿ ಸುಧಾರಿಸದೇ ಇದ್ದಾಗ ಐಸಿಯುವಿನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು.
ಇನ್ನೊಬ್ಬ ಸಿಬ್ಬಂದಿಗೆ ಕಣ್ಣಿನಲ್ಲಿ ಬಾವು, ತಲೆ ಸುತ್ತುವಿಕೆ ಹಾಗೂ ಗಂಟಲಿನಲ್ಲಿ ಕೆರೆತ ಸಮಸ್ಯೆ ಕಾಣಿಸಿಕೊಂಡಿದ್ದರೂ ಮೊದಲಿನ ಪ್ರಕರಣದಷ್ಟು ಸಮಸ್ಯೆ ಎದುರಾಗದೆ ಒಂದು ಗಂಟೆಯೊಳಗೆ ಆತನ ಸ್ಥಿತಿ ಸುಧಾರಿಸಿತ್ತು ಎಂದು www.nytimes.com ವರದಿ ಮಾಡಿದೆ.