ಭಾರತ ನಮ್ಮ ನೈಜ ಮಿತ್ರ: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ

Update: 2020-12-17 14:54 GMT

ಢಾಕಾ (ಬಾಂಗ್ಲಾದೇಶ), ಡಿ. 17: 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಅವಧಿಯಲ್ಲಿ ಭಾರತ ನೀಡಿರುವ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿರುವ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಭಾರತ ನಮ್ಮ ನೈಜ ಮಿತ್ರ ದೇಶವಾಗಿದೆ ಎಂದು ಹೇಳಿದ್ದಾರೆ.

1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿದೆ ಹಾಗೂ ಈ ಯುದ್ಧದ ಅವಧಿಯಲ್ಲಿ ಪಾಕಿಸ್ತಾನದ ಪೂರ್ವ ಭಾಗವು ಪ್ರತ್ಯೇಕಗೊಂಡು ಸ್ವತಂತ್ರ ಬಾಂಗ್ಲಾದೇಶದ ನಿರ್ಮಾಣವಾಯಿತು.

ಭಾರತವು ಈ ಗೆಲುವಿನ 50ನೇ ವಾರ್ಷಿಕ ದಿನವನ್ನು ಆಚರಿಸಿದ ಒಂದು ದಿನದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಜೊತೆಗೆ ನಡೆದ ಆನ್‌ಲೈನ್ ಶೃಂಗಸಭೆಯ ವೇಳೆ ಶೇಖ್ ಹಸೀನಾ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

‘‘ಭಾರತ ನಮ್ಮ ನಿಜವಾದ ಮಿತ್ರನಾಗಿದೆ’’ ಎಂದು ಹಸೀನಾ ಹೇಳಿದರು. ‘‘ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ 30 ಲಕ್ಷ ಹುತಾತ್ಮರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸಶಸ್ತ್ರ ಪಡೆಗಳ ಸದಸ್ಯರು ಮತ್ತು ಅವರ ಕುಟುಂಬ ಸದಸ್ಯರಿಗೆ ನಾನು ಗೌರವ ಸಲ್ಲಿಸುತ್ತೇನೆ. ನಮ್ಮ ದೇಶಕ್ಕೆ ತುಂಬು ಹೃದಯದ ಬೆಂಬಲ ನೀಡಿದ ಭಾರತದ ಜನತೆ ಮತ್ತು ಸರಕಾರಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ’’ ಎಂದು ಹಸೀನಾ ನುಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾದೇಶವು ಭಾರತದ ‘ನೆರೆಕರೆ ಪ್ರಥಮ’ ನೀತಿಯ ಪ್ರಮುಖ ಆಧಾರಸ್ತಂಭವಾಗಿದೆ ಎಂದು ಹೇಳಿದರು. ‘‘ವಿಮೋಚನಾ ವಿರೋಧಿ ಶಕ್ತಿಗಳ ವಿರುದ್ಧ ಬಾಂಗ್ಲಾದೇಶ ಗಳಿಸಿದ ವಿಜಯವನ್ನು ಆಚರಿಸಲು ನಾವು ಹೆಮ್ಮೆ ಪಡುತ್ತೇವೆ’’ ಎಂದು ಮೋದಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News