ಇರಾನ್ ಪರಮಾಣು ಒಪ್ಪಂದ ಉಳಿಸಿಕೊಳ್ಳಲು ಭಾಗೀದಾರರ ಮಾತುಕತೆ
ವಿಯನ್ನಾ (ಆಸ್ಟ್ರಿಯ), ಡಿ. 17: 2015ರ ಇರಾನ್ ಪರಮಾಣು ಒಪ್ಪಂದವನ್ನು ಉಳಿಸಿಕೊಳ್ಳುವ ವಿಧಾನಗಳ ಬಗ್ಗೆ ಒಪ್ಪಂದದಲ್ಲಿ ಈಗ ಉಳಿದಿರುವ ಪಕ್ಷಗಳು ಬುಧವಾರ ಮಾತುಕತೆ ನಡೆಸಿವೆ.
ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಮಂದಿನ ತಿಂಗಳು ಅಧಿಕಾರ ಸ್ವೀಕರಿಸುವ ಮುನ್ನ, ಅಮೆರಿಕದ ದಿಗ್ಬಂಧನಗಳು ಮತ್ತು ಇರಾನ್‌ನಿಂದ ಒಪ್ಪಂದದ ಅಂಶಗಳ ಉಲ್ಲಂಘನೆಗಳಿಂದ ಉದ್ಭವಿಸಿರುವ ಅನಿಶ್ಚಿತತೆಗಳ ನಡುವೆ ಈ ಮಾತುಕತೆ ನಡೆದಿದೆ.
ಒಪ್ಪಂದದ ಭಾಗೀದಾರ ದೇಶಗಳಾದ ಚೀನಾ, ಫ್ರಾನ್ಸ್, ರಶ್ಯ, ಇರಾನ್, ಜರ್ಮನಿ ಮತ್ತು ಬ್ರಿಟನ್‌ನ ಪ್ರತಿನಿಧಿಗಳು ಆನ್‌ಲೈನ್ ಮೂಲಕ ಎರಡು ಗಂಟೆಗಳ ಕಾಲ ಚರ್ಚಿಸಿದರು.
ಒಪ್ಪಂದದ ಅಂಶಗಳಿಗೆ ಬದ್ಧವಾಗಿರುವಂತೆ ಇರಾನನ್ನು ಒತ್ತಾಯಿಸಲು ಹಾಗೂ ರಾಜತಾಂತ್ರಿಕತೆಗೆ ಅವಕಾಶ ನೀಡಲು ಮಾತುಕತೆಯ ವೇಳೆ ನಿರ್ಧರಿಸಲಾಯಿತು ಎಂದು ಓರ್ವ ರಾಜತಾಂತ್ರಿಕರು ಹೇಳಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವಧಿಯಲ್ಲಿ ಬಹುಪಕ್ಷೀಯ ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ, ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ, 2018ರಲ್ಲಿ ಅಮೆರಿಕ ಈ ಒಪ್ಪಂದದಿಂದ ಹಿಂದೆ ಸರಿಯಿತು.
ಆದರೆ, ಈ ಒಪ್ಪಂದಕ್ಕೆ ಅಮೆರಿಕವನ್ನು ಮರುಸೇರ್ಪಡೆಗೊಳಿಸುವ ಇಂಗಿತವನ್ನು ನಿಯೋಜಿತ ಅಧ್ಯಕ್ಷ ಜೋ ಬೈಡನ್ ವ್ಯಕ್ತಪಡಿಸಿದ್ದಾರೆ. ಅವರು ಜನವರಿ 20ರಂದು ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.