×
Ad

ಏಳು ಒಪ್ಪಂದಗಳಿಗೆ ಭಾರತ-ಬಾಂಗ್ಲಾದೇಶ ಅಂಕಿತ: ಸ್ಥಗಿತಗೊಂಡಿದ್ದ ರೈಲು ಸಂಪರ್ಕ ಪುನರಾರಂಭಕ್ಕೆ ನಿರ್ಧಾರ

Update: 2020-12-17 21:50 IST

ಹೊಸದಿಲ್ಲಿ, ಡಿ.17: ತಮ್ಮ ನಡುವೆ ಹೆಚ್ಚುತ್ತಿರುವ ದ್ವಿಪಕ್ಷೀಯ ಸಂಬಂಧಗಳಿಗೆ ದ್ಯೋತಕವಾಗಿ ಭಾರತ ಮತ್ತು ಬಾಂಗ್ಲಾದೇಶ ಗುರುವಾರ ವಿವಿಧ ಕ್ಷೇತ್ರಗಳಲ್ಲಿ ತಮ್ಮ ನಡುವಿನ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಏಳು ಒಪ್ಪಂದಗಳಿಗೆ ಸಹಿ ಹಾಕಿವೆ. ಇದರ ಜೊತೆ 1965ರಲ್ಲಿ ಪಾಕಿಸ್ತಾನದ ಜೊತೆ ಯುದ್ಧದ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಉಭಯ ರಾಷ್ಟ್ರಗಳ ನಡುವಿನ ರೈಲ್ವೆ ಸಂಪರ್ಕವೊಂದನ್ನು ಮರುಸ್ಥಾಪಿಸಲೂ ಅವು ನಿರ್ಧರಿಸಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ನಡುವೆ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಹೈಡ್ರೋಕಾರ್ಬನ್, ಕೃಷಿ ಮತ್ತು ಜವಳಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಚಿಲಹಾತಿ-ಹಲ್ದಿಬಾರಿ ನಡುವಿನ ರೈಲು ಮಾರ್ಗವು ಬಾಂಗ್ಲಾದೇಶದ ಮೂಲಕ ಅಸ್ಸಾಂ ಮತ್ತು ಪಶ್ಚಿಮ ಬಂಗಾಳಗಳ ನಡುವೆ ಸಂಪರ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ. 1965ರವರೆಗೂ ಇದು ಕೋಲ್ಕತಾದಿಂದ ಸಿಲಿಗುರಿಗೆ ಬ್ರಾಡ್‌ಗೇಜ್ ಮುಖ್ಯ ಮಾರ್ಗದ ಭಾಗವಾಗಿತ್ತು. ಆದರೆ 1965ರಲ್ಲಿ ಪಾಕಿಸ್ತಾನದೊಂದಿಗಿನ ಯುದ್ಧದಿಂದಾಗಿ ಇವೆರಡು ದೇಶಗಳ ನಡುವಿನ ಎಲ್ಲ ರೈಲು ಸಂಪರ್ಕಗಳು ಸ್ಥಗಿತಗೊಂಡಿದ್ದವು. ಈ ಪೈಕಿ ನಾಲ್ಕು ರೈಲ್ವೆ ಮಾರ್ಗಗಳನ್ನು ಉಭಯ ದೇಶಗಳು ಈಗಾಗಲೇ ಪುನರಾರಂಭಿಸಿವೆ. ಚಿಲಹಾತಿ-ಹಲ್ದಿಬಾರಿ ರೈಲು ಮಾರ್ಗವು ಆರಂಭದಲ್ಲಿ ಸರಕುಗಳ ಸಾಗಣೆಗೆ ಅನುಕೂಲತೆಯನ್ನು ಕಲ್ಪಿಸಲಿದೆ. ಎರಡೂ ಕಡೆಗಳಲ್ಲಿ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಯ ಬಳಿಕ ಪ್ರಯಾಣಿಕರ ಸಂಚಾರವೂ ಆರಂಭಗೊಳ್ಳಲಿದೆ.

ವಿಜಯ ದಿವಸ್ ಆಚರಣೆಯ ಬೆನ್ನಲ್ಲೇ ವರ್ಚುವಲ್ ಶೃಂಗಸಭೆಯು ನಡೆಯುತ್ತಿರುವುದು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಿದ ಮೋದಿ,ಬಾಂಗ್ಲಾದೇಶವು ಭಾರತದ ‘ನೆರೆಹೊರೆ ಮೊದಲು’ ನೀತಿಯ ಮುಖ್ಯ ಆಧಾರಸ್ತಂಭವಾಗಿದೆ ಎಂದರು. ಬಾಂಗ್ಲಾದೇಶದ ಜನ್ಮಕ್ಕೆ ಕಾರಣವಾಗಿದ್ದ 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ವಿಜಯದ 50ನೇ ವರ್ಷಾಚರಣೆ ಸಂಭ್ರಮಕ್ಕೆ ಭಾರತವು ಬುಧವಾರ ಚಾಲನೆ ನೀಡಿದೆ. ಬಾಂಗ್ಲಾದೇಶವು ಡಿ.16ನ್ನು ‘ಬಿಜಯ ದಿಬೋಷ್’ ಎಂದು ಆಚರಿಸುತ್ತದೆ.

‘ಸ್ವಾತಂತ್ರ್ಯ ವಿರೋಧಿ ಶಕ್ತಿಗಳ ವಿರುದ್ಧ ಬಾಂಗ್ಲಾದೇಶದ ಐತಿಹಾಸಿಕ ವಿಜಯದ ಆಚರಣೆ ಹೆಮ್ಮೆಯ ವಿಷಯವಾಗಿದೆ. ಬಾಂಗ್ಲಾದೇಶವು ತನ್ನ 49ನೇ ಸ್ವಾತಂತ್ರ್ಯದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ತಮ್ಮ ಪ್ರಾಣತ್ಯಾಗ ಮಾಡಿದ ಉಭಯ ದೇಶಗಳ ಯೋಧರಿಗೆ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತೇನೆ ’ಎಂದು ಮೋದಿ ನುಡಿದರು.

ಬಾಂಗ್ಲಾದೇಶದ ಸ್ಥಾಪಕ ಮುಜಿಬುರ್ ರೆಹಮಾನ್ ಮತ್ತು ಮಹಾತ್ಮಾ ಗಾಂಧೀಜಿ ಅವರ ಜೀವನ ಮತ್ತು ಪರಂಪರೆಗಳನ್ನು ಸಾರುವ ಡಿಜಿಟಲ್ ಪ್ರದರ್ಶನವನ್ನು ಉಭಯ ಪ್ರಧಾನಿಗಳು ಜಂಟಿಯಾಗಿ ಉದ್ಘಾಟಿಸಿದರು.

ತಾನು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಬಾಂಗ್ಲಾದೇಶದೊಂದಿಗೆ ಭಾರತದ ಸಂಬಂಧಗಳನ್ನು ಇನ್ನಷ್ಟು ಗಟ್ಟಿ ಮತ್ತು ಇನ್ನಷ್ಟು ಗಾಢಗೊಳಿಸುವುದು ತನ್ನ ವಿಶೇಷ ಆದ್ಯತೆಯಾಗಿದೆ ಎಂದ ಮೋದಿ,ಕೊರೋನ ಸಾಂಕ್ರಾಮಿಕವಿದ್ದರೂ ಉಭಯ ರಾಷ್ಟ್ರಗಳ ನಡುವಿನ ಸಹಕಾರವು ಉತ್ತಮವಾಗಿದೆ ಎಂದರು.

ತನ್ನ ಹೇಳಿಕೆಯಲ್ಲಿ ಭಾರತವನ್ನು ನಿಜವಾದ ಸ್ನೇಹಿತ ಎಂದು ಬಣ್ಣಿಸಿದ ಶೇಖ್ ಹಸೀನಾ,ಭಾರತವು ಕೊರೋನ ವೈರಸ್ ಬಿಕ್ಕಟ್ಟನ್ನು ಎದುರಿಸಿದ ರೀತಿಯನ್ನು ಪ್ರಶಂಸಿಸಿದರು. ಸಾಂಕ್ರಾಮಿಕದಿಂದ ತೀವ್ರ ಸಂಕಷ್ಟದಲ್ಲಿರುವ ಜಾಗತಿಕ ಆರ್ಥಿಕತೆಯ ಚೇತರಿಕೆಗೆ ಭಾರತವು ಮಹತ್ವದ ಕೊಡುಗೆಯನ್ನು ನೀಡುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಸಾರ್ಕ್ ವ್ಯವಸ್ಥೆಯಡಿ ಬಾಂಗ್ಲಾದೇಶದ ಕೊಡುಗೆಗಾಗಿ ಮತ್ತು ಮುಂದಿನ ವರ್ಷ ತನ್ನನ್ನು ಬಾಂಗ್ಲಾದೇಶದ ಭೇಟಿಗೆ ಆಹ್ವಾನಿಸಿದ್ದಕ್ಕಾಗಿ ಮೋದಿ, ಹಸೀನಾ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News