ಗೋವಾದಲ್ಲಿ ಬೀಫ್ ಗೆ ಕೊರತೆ: ಕರ್ನಾಟಕದಿಂದ ಪೂರೈಕೆಯ ವ್ಯವಸ್ಥೆ ಮಾಡುತ್ತೇನೆಂದ ಗೋವಾ ಸಿಎಂ

Update: 2020-12-17 17:08 GMT

ಪಣಜಿ,ಡಿ.17: ಗೋವಾದಲ್ಲಿ ಹಬ್ಬದ ಕಾಲಮಾನ ಪ್ರಾರಂಭವಾಗುತ್ತಿದ್ದಂತೆಯೇ ಮಾಂಸದ ಕೊರತೆಯು ತೀವ್ರತರದಲ್ಲಿ ಕಾಡಲು ಆರಂಭವಾಗಿದೆ. ಕರ್ನಾಟಕದಿಂದ ಬೀಫ್ ರಫ್ತು ಸ್ಥಗಿತಗೊಂಡಿರುವ ಕಾರಣ ಗೋವಾದ ಮಾಂಸ ಮಳಿಗೆಗಳು ಸತತ 6ನೇ ದಿನವೂ ಮುಚ್ಚಿಯೇ ಇದೆ. ಕಳೆದ ಗುರುವಾರದಂದು ಕರ್ನಾಟಕದಿಂದ ಮಾಂಸ ರಫ್ತಾಗಿದ್ದು, ಈ ವಾರದ ಪ್ರಾರಂಭದಿಂದಲೇ ಬೀಫ್ ಕೊರತೆ ಎದುರಾಗಿದೆ ಎಂದು timesofindia.com ವರದಿ ಮಾಡಿದೆ.

ಕರ್ನಾಟಕ ಅಸೆಂಬ್ಲಿಯಲ್ಲಿ ಗೋಹತ್ಯೆ ನಿಷೇಧ ಮತ್ತು ಗೋ ಸಂರಕ್ಷಣಾ ಕಾಯ್ದೆಯ ಮಂಡನೆಯಾದ ಬಳಿಕ ದನಗಳ ಮತ್ತು ಮಾಂಸ ಪ್ರಮಾಣಿಕರಣವೂ ಸ್ಥಗಿತವಾಗಿದೆ. ಆದ್ದರಿಂದ ಮಾಂಸ ಮತ್ತು ದನಗಳನ್ನು ಸಾಗಾಟ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕಾಯ್ದೆಯು ದನಗಳನ್ನು ಮಾರಾಟ ಮಾಡಲು ಮತ್ತು ಮಾಂಸಕ್ಕಾಗಿ ಸಾಗಾಟ ಮಾಡಲು ಅನುಮತಿಸುವುದಿಲ್ಲ ಎಂದು ಖುರೇಷಿ ಮಾಂಸ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಅನ್ವರ್ ಬೇಪಾರಿ ಹೇಳಿದ್ದಾರೆಂದು ವರದಿ ತಿಳಿಸಿದೆ.

ಈ ಕುರಿತು ಮಾಂಸ ಮಾರಾಟಗಾರರಿಗೆ ಭರವಸೆ ನೀಡಿದ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕರ್ನಾಟಕದಿಂದ ಬೀಫ್ ಪೂರೈಕೆಯನ್ನು ಮರು ಪ್ರಾರಂಭಿಸುವ ಕುರಿತಾದಂತೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದಾರೆ. “ಈ ಬಿಕ್ಕಟ್ಟಿನ ಕುರಿತು ಪಶುಸಂಗೋಪನಾ ನಿರ್ದೇಶಕರು ಮತ್ತು ಕಾರ್ಯದರ್ಶಿಗಳೊಂದಿಗೆ ಮಾತನಾಡಿ ಪೂರಕ ವ್ಯವಸ್ಥೆ ಮಾಡಲಾಗುವುದು” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಗೋವಾ ರಾಜ್ಯದಲ್ಲಿ ದೈನಂದಿನ 15ರಿಂದ 20 ಟನ್ ಗಳಷ್ಟು ಬೀಫ್ ಸೇವಿಸಲಾಗುತ್ತದೆ. ಗೋವಾದಲ್ಲಿ ಬೀಫ್ ಕೊರತೆ ಎದುರಾದ ಬಳಿಕ ಅಲ್ಲಿನ ಮಾಂಸ ಮಾರಾಟಗಾರರು ಕರ್ನಾಟಕವನ್ನೇ ಆಶ್ರಯಿಸಿಕೊಂಡಿದ್ದರು. “ಮಾಂಸದ ಅಂಗಡಿಗಳನ್ನೆಲ್ಲಾ ಮುಚ್ಚಲಾಗಿದೆ. ಇದೇ ವ್ಯವಹಾರವನ್ನು ನಂಬಿಕೊಂಡಿರುವ ಹಲವರು ಸಂಕಷ್ಟದಲ್ಲಿದ್ದಾರೆ. ಬೀಫ್ ಅನ್ನೇ ನೆಚ್ಚಿಕೊಂಡಿರುವ ರೆಸ್ಟೋರೆಂಟ್, ಬೇಕರಿ, ಹೋಟೆಲ್ ಗಳಿವೆ. ಅಲ್ಲದೇ, ಈಗ ಪ್ರವಾಸಿಗಳು ಕೂಡಾ ಬೀಫ್ ಗೆ ಬೇಡಿಕೆ ಇಡುತ್ತಿದ್ದಾರೆ” ಎಂದು ಬೇಪಾರಿ ಹೇಳಿದ್ದಾಗಿ timesofindia.com ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News