ಕೇರಳ: 10, 12ನೇ ತರಗತಿ ಜನವರಿ 1ರಿಂದ ಆರಂಭ

Update: 2020-12-17 18:28 GMT

ತಿರುವನಂತಪುರ, ಡಿ. 17: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳ ಒಂದು ವಿಭಾಗಕ್ಕೆ ನಿರ್ದಿಷ್ಟ ಷರತ್ತುಗಳೊಂದಿಗೆ ಜನವರಿ 1ರಿಂದ ತರಗತಿ ಆರಂಭಿಸಲು ನಿರ್ಧರಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಹಾಗೂ ಪ್ಲಸ್‌ಟು ಪರೀಕ್ಷೆಯನ್ನು ಮಾರ್ಚ್ 17ರಿಂದ 30ರ ವರೆಗೆ ಕೊರೋನ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಡೆಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ.

ಪಬ್ಲಿಕ್ ಪರೀಕ್ಷೆಯ ಒಂದು ಭಾಗವಾಗಿ ನಡೆಯಲಿರುವ ಪ್ರಾಯೋಗಿಕ ಪರೀಕ್ಷೆಗೆ ಸಿದ್ಧವಾಗುತ್ತಿರುವ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಜನವರಿ 1ರಿಂದ ತರಗತಿ ಆರಂಭವಾಗಲಿದೆ.

10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ-ಆಧಾರಿತ ಪುನರಾವರ್ತನೆ ಹಾಗೂ ಸಂಶಯ ನಿವಾರಣೆ ತರಗತಿ ಜನವರಿ 1ರಿಂದ ಆರಂಭವಾಗಲಿದೆ. ಇದು ಈ ವರ್ಷ ಜೂನ್‌ನಿಂದ ಆರಂಭಿಸಲಾದ ಆನ್‌ಲೈನ್ ತರಗತಿಯ ಮುಂದುವರಿದ ಭಾಗ. ಆದರೆ, ಶಾಲೆಯಲ್ಲಿ ಈ ತರಗತಿಗೆ ಹಾಜರಾಗಲು ವಿದ್ಯಾರ್ಥಿಗಳು ಪೋಷಕರ ಅನುಮತಿ ಪಡೆಯವ ಅಗತ್ಯ ಇದೆ.

10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಮಾಲೋಚನೆ ಹಾಗೂ ಮಾದರಿ ಪರೀಕ್ಷೆ ನಡೆಸಲಾಗುವುದು. 11 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‌ಲೈನ್ ಸೂಚನೆಗಳು ನಿಗದಿತ ವೇಳಾಪಟ್ಟಿಯಂತೆ ಮುಂದುವರಿಯಲಿದೆ.

 ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಲು ಉನ್ನತ ಮಟ್ಟದ ಸಭೆ ನಿರ್ಧರಿಸಿದೆ. ಆದರೆ, ನೀಡಲಾದ ಸಮಯದಲ್ಲಿ ಶೇ. 50ರಷ್ಟು ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗಬೇಕು. ತರಗತಿಯನ್ನು ಬೆಳಗ್ಗೆ ಹಾಗೂ ಮಧ್ಯಾಹ್ನ ನಡೆಸಬೇಕು.

ಕೃಷಿ ಹಾಗೂ ಮೀನುಗಾರಿಕೆ ವಿಶ್ವವಿದ್ಯಾನಿಲಯದ ತರಗತಿಗಳು ಕೂಡ ಜನವರಿ 1ರಿಂದ ಆರಂಭವಾಗಲಿದೆ. ತರಗತಿಗೆ ಶೇ. 50ರಷ್ಟು ವಿದ್ಯಾರ್ಥಿಗಳು ಹಾಜರಾಗಬಹುದು. ವೈದ್ಯಕೀಯ ಕಾಲೇಜಿನ 2ನೇ ವರ್ಷ ಹಾಗೂ ಅದಕ್ಕಿಂತ ಮೇಲಿನ ತರಗತಿಯ ವಿದ್ಯಾರ್ಥಿಗಳಿಗೆ ಜನವರಿ 1ರಿಂದ ತರಗತಿ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News