ಬಾಕ್ಸಿಂಗ್: ಭಾರತಕ್ಕೆ ನಾಲ್ಕು ಪದಕ
ಹೊಸದಿಲ್ಲಿ, ಡಿ.17: ಜರ್ಮನಿಯಲ್ಲಿ ಬಾಕ್ಸಿಂಗ್ ವಿಶ್ವಕಪ್ ಸ್ಪರ್ಧೆ ನಡೆಯುವ ಮೊದಲೇ ಭಾರತವು ನಾಲ್ಕು ಪದಕಗಳನ್ನು ದೃಢಪಡಿಸಿದೆ. ಗುರುವಾರ ಡ್ರಾ ಪ್ರಕ್ರಿಯೆ ನಡೆದಿದ್ದು ಭಾರತದ ನಾಲ್ವರು ಬಾಕ್ಸರ್‌ಗಳು ನೇರವಾಗಿ ಸೆಮಿ ಫೈನಲ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ.
ಏಶ್ಯನ್ ಗೇಮ್ಸ್ ಚಾಂಪಿಯನ್ ಹಾಗೂ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಅಮಿತ್ ಪಾಂಘಾಲ್ (52ಕೆಜಿ)ಪುರುಷರ ವಿಭಾಗದಲ್ಲಿ ಸೆಮಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಪೂಜಾ ರಾಣಿ(75ಕೆಜಿ), ಮನೀಶಾ(57ಕೆಜಿ) ಹಾಗೂ ಸಿಮ್ರಾನ್ ಜಿತ್ ಕೌರ್ (60ಕೆಜಿ)ಮಹಿಳೆಯರ ವಿಭಾಗದಲ್ಲಿ ಸೆಮಿಫೈನಲ್ ಸುತ್ತಿನಲ್ಲಿ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಭಾರತ ತಂಡ ಫಿಟ್ನೆಸ್ ಸಮಸ್ಯೆಯಿಂದ ಬಾಧಿತವಾಗಿದ್ದು, ನಾಲ್ಕು ಬಾರಿ ಏಶ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತ ಶಿವ ಥಾಪ(63ಕೆಜಿ) ಹಾಗೂ ಸಂಜೀತ್ (91ಕೆಜಿ)ಗಾಯದ ಸಮಸ್ಯೆ ಕಾರಣಕ್ಕೆ ಟೂರ್ನಿಯಿಂದ ಹೊರ ನಡೆದಿದ್ದಾರೆ.
ಟೂರ್ನಿಯಲ್ಲಿ ಭಾರತ ತಂಡದ ಪುರುಷರ ವಿಭಾಗದಲ್ಲಿ ನಾಲ್ವರು ಹಾಗೂ ಮಹಿಳಾ ವಿಭಾಗದಲ್ಲಿ ಐವರು ಸ್ಪರ್ಧಿಸಲಿದ್ದಾರೆ. ಆತಿಥೇಯ ಜರ್ಮನಿ, ಬೆಲ್ಜಿಯಂ, ಕ್ರೋಯೇಶಿಯ, ಡೆನ್ಮಾರ್ಕ್, ಫ್ರಾನ್ಸ್, ಮೊಲ್ಡೊವಾ, ನೆದರ್ ಲ್ಯಾಂಡ್, ಪೋಲ್ಯಾಂಡ್ ಹಾಗೂ ಯುಕ್ರೇನ್ ದೇಶಗಳು ಟೂರ್ನಿಯಲ್ಲಿ ಭಾಗವಹಿಸಲಿವೆ.