ಕೈಮುಗಿದು, ತಲೆಬಾಗಿಸಿ ನಿಮ್ಮೊಂದಿಗೆ ಚರ್ಚೆಗೆ ಸಿದ್ಧ: ರೈತರಿಗೆ ಪ್ರಧಾನಿ ಮೋದಿ
ಹೊಸದಿಲ್ಲಿ,ಡಿ.18: ನೂತನ ಕೃಷಿ ಕಾಯಿದೆಗಳ ಕುರಿತು ರೈತರಿಗೆ ಇರುವ ಯಾವುದೇ ಆಕ್ಷೇಪಗಳ ಕುರಿತು `ಕೈಮುಗಿದು', ‘ತಲೆಬಾಗಿಸಿ’ ಚರ್ಚಿಸಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.
“ಯಾರಿಗಾದರೂ ಏನಾದರೂ ಆಕ್ಷೇಪವಿದ್ದರೆ ನಾವು ತಲೆ ಬಗ್ಗಿಸಿ, ಕೈ ಮುಗಿದು ಅತ್ಯಂತ ವಿನಯದಿಂದ ನಿಮ್ಮ ಭಯಗಳನ್ನು ದೂರಗೊಳಿಸಲು ಸಿದ್ಧ,” ಎಂದು ಮಧ್ಯ ಪ್ರದೇಶದ ರೈತರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಹೇಳಿದರು. ಕನಿಷ್ಠ ಬೆಂಬಲ ಬೆಲೆ ಅಥವಾ ಎಂಎಸ್‍ಪಿ ಅಂತ್ಯವಾಗಲಿದೆಯೆಂದು ಯಾರಾದರೂ ಹೇಳಿದ್ದರೆ ಅದೊಂದು ಅತ್ಯಂತ ದೊಡ್ಡ ಸುಳ್ಳು ಎಂದು ಪ್ರಧಾನಿ ಹೇಳಿದರು.
ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ “ಇಂದು ಈ ಪಕ್ಷಗಳಿಗೆ ನೋವಾಗಿದೆ. ಅವು ತಮ್ಮನ್ನು ತಾವೇ ಕೇಳಿಕೊಳ್ಳುತ್ತಿವೆ. ನಮಗೆ (ಕೃಷಿ ಕಾನೂನು ಜಾರಿ) ಮಾಡಲು ಸಾಧ್ಯವಾಗದೆ ಇದ್ದಾಗ, ಮೋದಿ ತಾನೇ ಹೇಗೆ ಮಾಡಬಲ್ಲರು ಎಂದವರು ಪ್ರಶ್ನಿಸುತ್ತಿದ್ದಾರೆ. ಆತನಿಗೆ ಏಕೆ ಈ ಕೃಷಿ ಸುಧಾರಣೆಗಳನ್ನು ಮಾಡಿದ ಶ್ರೇಯಸ್ಸು ದೊರೆಯಬೇಕು ಎಂದವರು ಕೇಳುತ್ತಿದ್ದಾರೆ. ನಾನು ಅವರಿಗೆ ನೀಡುವ ಉತ್ತರವೇನೆಂದರೆ, ಇದರ ಹೆಗ್ಗಳಿಕೆ ನಿಮಗೆ ಸಲ್ಲಲಿ. ನಿಮ್ಮದೇ ಆದ ಪ್ರಣಾಳಿಕೆಗಳಿಗೆ ಇದರ ಶ್ರೇಯಸ್ಸನ್ನು ಸಲ್ಲಿಸುತ್ತೇನೆ ನನಗೇನೂ ಹೆಗ್ಗಳಿಕೆ ಬೇಡ. ನನಗೆ ರೈತರ ಬದುಕು ಸುಧಾರಣೆಯಾಗುವುದು ಬೇಕಾಗಿದೆ. ಇನ್ನಾದರೂ ರೈತರನ್ನು ದಾರಿತಪ್ಪಿಸುವುದನ್ನು ನಿಲ್ಲಿಸಿ’’ ಎಂದು ಕಟಕಿಯಾಡಿದರು.
ನೂತನ ಕಷಿ ಕಾನೂನುಗಳ ವಿರುದ್ಧ ದಿಲ್ಲಿಯಲ್ಲಿ ರೈತರು ಪ್ರತಿಭಟನೆ ಮುಂದುವರಿಸಿರುವ ಹಿನ್ನೆಲೆಯಲ್ಲಿ ರೈತ ಸಮುದಾಯವನ್ನು ತಲುಪಲು ಕೇಂದ್ರ ಸರಕಾರ ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿ ಪ್ರಧಾನಿ ಈ ವಿಡಿಯೋಕಾನ್ಫರೆನ್ಸ್ ಭಾಷಣ ಮಾಡಿದ್ದಾರೆ.
‘‘ಅನ್ನದಾತರ ಬಗ್ಗೆ ಯಾವುದೇ ಅಪ್ಪಟವಾದ ಕಾಳಜಿ ಹೊಂದಿರದವರನ್ನು ಬಯಲಿಗೆಳೆಯಲು ಬಯಸುತ್ತೇನೆ. ಕೃಷಿ ಕಾನೂನುಗಳ ಹೆಸರಿನಲ್ಲಿ ಜನರನ್ನು ದಾರಿತಪ್ಪಿಸುವ ಅಥವಾ ಪ್ರಚೋದಿಸುವವರ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕೆಂದು ನಾನು ಬಯಸುತ್ತೇನೆ’’ ಎಂದು ಪ್ರಧಾನಿ ತಿಳಿಸಿದರು.
‘‘2018ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೇರಿದ 10 ದಿನಗಳೊಳಗೆ ಪ್ರತಿಯೊಬ್ಬ ರೈತನ ಕೃಷಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಅವರು ಸುಳ್ಳು ಹೇಳಿದ್ದಲ್ಲದೆ ಬೇರೇನೂ ಮಾಡಲಿಲ್ಲ. ಪೊಳ್ಳು ಭರವಸೆಗಳನ್ನು ನೀಡಿ ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ ಹಾಗೂ ನಿಮ್ಮಲ್ಲಿನ ಭಯದ ಮೇಲೆ ಅಟವಾಡುತ್ತಿದ್ದಾರೆ’’ ಎಂದವರು ಹೇಳಿದರು.