ಕೊರೋನ ಕುಂಟು ನೆಪ ಹೇಳಿ ಕೃಷಿ ಕಾಯ್ದೆಗಳನ್ನು ಅವಸರವಾಗಿ ಜಾರಿ ಮಾಡಲಾಗಿದೆ: ಎಂ.ಕೆ ಸ್ಟಾಲಿನ್

Update: 2020-12-18 16:51 GMT

ಹೊಸದಿಲ್ಲಿ,ಡಿ.18: ಕೇಂದ್ರ ಸರಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೊಸದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಹಾಗೂ ಅದರ ಮಿತ್ರ ಪಕ್ಷಗಳು ಶುಕ್ರವಾರ ಚೆನ್ನೈನಲ್ಲಿ ನಿರಶನ ನಡೆಸಿದವು. ನಿರಶನದಲ್ಲಿ ಪಾಲ್ಗೊಂಡು ಮಾತನಾಡಿದ ಎಂ.ಕೆ. ಸ್ಚಾಲಿನ್ ಅವರು, ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುವವರು ದೇಶದ್ರೋಹಿಗಳೆಂಬ ಕೇಂದ್ರ ಸರಕಾರದ ಹೇಳಿಕೆಯನ್ನು ಖಂಡಿಸಿದರು ಹಾಗೂ ಪ್ರತಿಭಟನಾ ನಿರತ ರೈತರಿಗೆ ಬೆಂಬಲವನ್ನು ಘೋಷಿಸಿದರು.

‘‘ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ರೈತರ ವಿರುದ್ಧ ಮೂರು ಕಾನೂನುಗಳನ್ನು ಜಾರಿಗೊಳಿಸಿವೆ. ಕಾಯ್ದೆಗಳ ವಿರುದ್ಧ ರೈತರು 23 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಬೆಂಬಲ ಸೂಚಿಸಿ ಇಂದು ನಾವು ನಿರಶನ ಹಾಗೂ ಪ್ರತಿಭಟನೆಯನ್ನು ನಡೆಸಿದ್ದೇವೆ’’ ಎಂದರು.

ಬಿಜೆಪಿ ಹಾಗೂ ರಾಜ್ಯದ ಆಡಳಿತಾರೂಢ ಎಡಿಎಂಕೆ ಪಕ್ಷವು ಜನರಿಗೆ ಹಿತಕರವಲ್ಲದ ಕಾನೂನುಗಳನ್ನು ಜಾರಿಗೊಳಿಸುತ್ತಿವೆ. ಕೊರೋನ ವೈರಸ್ ಸಾಂಕ್ರಾಮಿಕದ ಕುಂಟುನೆಪ ಹೇಳಿ, ಕೃಷಿ ಕಾಯ್ದೆಗಳನ್ನು ಅವಸರವಸರವಾಗಿ ಜಾರಿಗೊಳಿಸಲಾಗಿದೆ ಎಂದು ಸ್ಟಾಲಿನ್ ಟೀಕಿಸಿದರು.

 ಭಾರತದ ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ದಿಲ್ಲಿಯಲ್ಲಿರುವವರು ಪ್ರತಿಭಟನೆಯ ಮನಸ್ಥಿತಿಯಲ್ಲಿದ್ದಾರೆಂದು ಹೇಳಿದ ಅವರು ಇಂದಿನ ಪ್ರತಿಭಟನೆಯಲ್ಲಿ ಪಾಲ್ಗೊಂಡ ತನ್ನ ಪಕ್ಷದ ಸದಸ್ಯರು ಹಾಗೂ ಮಿತ್ರಪಕ್ಷಗಳನ್ನು ಅವರು ಸ್ವಾಗತಿಸಿದರು. ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡ ರೈತರಿಗಾಗಿ ಸಭೆಯಲ್ಲಿ ಎರಡು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News