“ಆರೆಸ್ಸೆಸ್ ಮತ್ತು ಬಿಜೆಪಿ ಸಿಖ್ ಜನಾಂಗವನ್ನೇ ಮುಗಿಸಲು ಯತ್ನಿಸುತ್ತಿವೆ”
► ಆರೆಸ್ಸೆಸ್ ವಿರುದ್ಧ ಸ್ಫೋಟಕ ಆರೋಪ
ಚಂಡೀಗಢ,ಡಿ.18: ದಿಲ್ಲಿಯ ಹೊರವಲಯದ ಸಂಘು ಬಾರ್ಡರ್ ನಲ್ಲಿ, “ರೈತರಿಗೆ ಅನ್ಯಾಯವಾಗುತ್ತಿರುವ ಕಾರಣ ನಾನು ನನ್ನ ಜೀವವನ್ನೇ ತ್ಯಾಗ ಮಾಡುವ ಮೂಲಕ ಪ್ರತಿಭಟಿಸುತ್ತಿದ್ದೇನೆ ಎಂದು ಬರೆದಿಟ್ಟು ಸಿಖ್ ಧರ್ಮಗುರು ಹಾಗೂ ಪ್ರಬೋಧಕ ಬಾಬಾ ರಾಮ್ ಸಿಂಗ್ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಆತ್ಮಹತ್ಯೆಗೂ ಮುಂಚೆ ಅವರು ಬರೆದಿಟ್ಟಿದ್ದ ದೀರ್ಘವಾದ ಪತ್ರವೊಂದು ದೊರಕಿದ್ದು, ಬಿಜೆಪಿ ಮತ್ತು ಆರೆಸ್ಸೆಸ್ ಸಿಖ್ ಜನಾಂಗವನ್ನೇ ಮುಗಿಸಲು ಪ್ರಯತ್ನಿಸುತ್ತಿದೆ’ ಎಂದು ಬರೆದಿರುವುದಾಗಿ theprint.in ವರದಿ ಮಾಡಿದೆ.
“ಆರೆಸ್ಸೆಸ್ ಮತ್ತು ಬಿಜೆಪಿ ಕೇವಲ ರೈತರಿಗೆ ಮಾತ್ರ ಅನ್ಯಾಯ ಮಾಡುತ್ತಿರುವುದಲ್ಲ. ಸಂಪೂರ್ಣ ಸಿಖ್ ಜನಾಂಗವನ್ನೇ ಮುಗಿಸಲು ಹವಣಿಸುತ್ತಿದೆ. ಸಿಖ್ ಸಮುದಾಯವು ಹಲವು ಬಾರಿ ಆಕ್ರಮಣಕ್ಕೊಳಗಾಗಿದೆ ಮತ್ತು ಈಗಲೂ ಆಕ್ರಮಣಕ್ಕೊಳಗಾಗುತ್ತಿದೆ. ಕೆಲವು ಸಿಖ್ ಗಳು ಆರೆಸ್ಸೆಸ್ ನ ಅಂದಾಭಿಮಾನಿಗಳಾಗಿದ್ದಾರೆ. ಆರೆಸ್ಸೆಸ್ ನೊಂದಿಗೆ ಸಿಖ್ ಗಳು ಸೇರಿಕೊಂಡಿರುವುದು ನಿಜಕ್ಕೂ ನಾಚಿಗೇಡು. ಕೆಲವರು ಅಧಿಕಾರದಾಸೆಯಿಂದ, ಕೆಲವರು ಹಣದಾಸೆಗಾಗಿ ಇನ್ನು ಕೆಲವರು ಬಲಾತ್ಕಾರದಿಂದ ಆರೆಸ್ಸೆಸ್ ಮತ್ತು ಬಿಜೆಪಿ ಜೊತೆಗಿದ್ದಾರೆ. ಹಾವಿನಂತೆ ಆರೆಸ್ಸೆಸ್ ಸಿಖ್ ಸಮುದಾಯದ ಬಳಿ ಸುಳಿಯುತ್ತಲೇ ಇದೆ”
ಸಿಖ್ ಸಮುದಾಯ ಈ ಹಿಂದೆಯೂ ಹಲವುಬಾರಿ ಆಕ್ರಮಣಕ್ಕೊಳಗಾಗಿತ್ತು. ಈಗಲೂ ಆಕ್ರಮಣಕ್ಕೊಳಗಾಗುತ್ತಲೇ ಇದೆ. ಹರ್ಮಂದರ್ ಸಾಹಿಬ್ (ಗೋಲ್ಡನ್ ಟೆಂಪಲ್) ವಿರುದ್ಧ ದಾಳಿ (ಆಪರೇಷನ್ ಬ್ಲೂಸ್ಟಾರ್) ನಡೆಸಲು ಇಂದಿರಾ ಗಾಂಧಿಯನ್ನು ಪ್ರಚೋದಿಸಿದ್ದು ಆರೆಸ್ಸೆಸ್ ಮತ್ತು ಬಿಜೆಪಿ. ಈ ಕುರಿತು ಈಗಲೂ ದಾಖಲೆಗಳು ದೊರೆಯುತ್ತದೆ. ರೈತರ ವಿರುದ್ಧ ನಡೆಯುತ್ತಿರುವ ಅನ್ಯಾಯವನ್ನು ಕೇಳಿಯೇ ನನಗೆ ದುಃಖವಾಗಿತ್ತು. ಈಗ ಕಣ್ಣಾರೆ ನೋಡುತ್ತಿದ್ದೇನೆ. ನನ್ನ ಹೃದಯವು ಭಾರವಾಗಿದೆ” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ ಎಂದು ವರದಿ ತಿಳಿಸಿದೆ.
ಬಾಬಾ ರಾಮ್ ಸಿಂಗ್ ಒಟ್ಟು 10 ಪುಟಗಳ ಪತ್ರವನ್ನು ಬರೆದಿದ್ದು, ಈ ಪತ್ರದಲ್ಲಿ ಹಲವಾರು ವಿಚಾರಗಳನ್ನು ಉಲ್ಲೇಖಿಸಲಾಗಿದೆ. “ಈ ಪತ್ರದಲ್ಲಿರುವ ಕೈಬರಹವು ಬಾಬಾ ರಾಮ್ ಸಿಂಗ್ ರದ್ದೇ ಎಂದು ನಾನು ಸ್ಪಷ್ಟಪಡಿಸುತ್ತಿದ್ದೇನೆ. ಈ ಕುರಿತು ಯಾರಿಗಾದರೂ ಸಂಶಯಗಳಿದ್ದರೆ ಯಾವುದೇ ರೀತಿಯ ಪರೀಕ್ಷೆಯನ್ನೂ ನಡೆಸಬಹುದು” ಎಂದು ರಾಮ್ ಸಿಂಗ್ ರ ಪ್ರಮುಖ ಅನುಯಾಯಿ ಸಂತ್ ಭೋಲಾ ಹೇಳಿದ್ದಾರೆ