2021ರ ಆರಂಭದಲ್ಲಿ ಬಡ ದೇಶಗಳಿಗೆ ಕೊರೋನ ಲಸಿಕೆ ಪೂರೈಕೆ ಆರಂಭ: ವಿಶ್ವ ಆರೋಗ್ಯ ಸಂಸ್ಥೆ
ಜಿನೀವ (ಸ್ವಿಟ್ಸರ್‌ಲ್ಯಾಂಡ್), ಡಿ. 19: ಕೊರೋನ ವೈರಸ್ ಲಸಿಕೆಗಳು ಬಡ ದೇಶಗಳ ಜನರಿಗೆ ಮುಂದಿನ ವರ್ಷದ ಆರಂಭದಲ್ಲಿ ಲಭ್ಯವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಶುಕ್ರವಾರ ತಿಳಿಸಿದೆ.
ಬಡ ದೇಶಗಳ ಜನರಿಗೂ ಕೊರೋನ ವೈರಸ್ ಲಸಿಕೆಗಳು ಸುಲಭವಾಗಿ ಸಿಗಬೇಕು ಎನ್ನುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ಗವಿ ವ್ಯಾಕ್ಸಿನ್ ಅಲಯನ್ಸ್ ಮತ್ತು ಕೋಯಲೀಶನ್ ಫಾರ್ ಎಪಿಡೆಮಿಕ್ ಪ್ರಿಪೇರ್ಡ್‌ನೆಸ್ ಇನೋವೇಶನ್ಸ್ (ಸಿಇಪಿಐ)ಗಳ ಸಹಯೋಗದೊಂದಿಗೆ ‘ಕೋವ್ಯಾಕ್ಸ್’ ಎಂಬ ಸಂಸ್ಥೆಯನ್ನು ನಿರ್ಮಿಸಿದೆ. ಅದು ಈಗಾಗಲೇ ಸಂಭಾವ್ಯ ಲಸಿಕೆಗಳ ಸುಮಾರು 200 ಕೋಟಿ ಡೋಸ್‌ಗಳನ್ನು ಕಾದಿರಿಸಿದೆ.
ಅವೆುರಿಕ ಮತ್ತು ಬ್ರಿಟನ್ ಸೇರಿದಂತೆ ವಿವಿಧ ದೇಶಗಳು ಫೈಝರ್ ಮತ್ತು ಬಯೋಎನ್‌ಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಜನರಿಗೆ ನೀಡಲು ಆರಂಭಿಸಿವೆ. ಅಮೆರಿಕದ ಇನ್ನೊಂದು ಔಷಧ ತಯಾರಿಕಾ ಕಂಪೆನಿ ಮೋಡರ್ನಾ ಅಭಿವೃದ್ಧಿಪಡಿಸಿರುವ ಕೊರೋನ ವೈರಸ್ ಲಸಿಕೆಯನ್ನು ಮುಂದಿನ ದಿನಗಳಲ್ಲಿ ವಿವಿಧ ದೇಶಗಳು ತುರ್ತು ಬಳಕೆಗಾಗಿ ಅಂಗೀಕರಿಸುವ ಸಾಧ್ಯತೆಯಿದೆ.
ಕೋವ್ಯಾಕ್ಸ್‌ನ 200 ಕೋಟಿ ಡೋಸ್‌ಗಳಲ್ಲಿ ಈ ಎರಡು ಕಂಪೆನಿಗಳ ಲಸಿಕೆಗಳಿಲ್ಲ. ಆದರೆ, ಲಸಿಕೆಗಳನ್ನು ಪಡೆಯುವ ನಿಟ್ಟಿನಲ್ಲಿ ಈ ಎರಡೂ ಕಂಪೆನಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿರುವುದಾಗಿ ಡಬ್ಲುಎಚ್‌ಒ ಹೇಳಿದೆ.
‘‘ನಮ್ಮ ಲಸಿಕೆ ಯೋಜನೆಯಲ್ಲಿ ಭಾಗಿಯಾಗಿರುವ ಎಲ್ಲ ದೇಶಗಳು ಮುಂದಿನ ವರ್ಷದ ಮೊದಲಾರ್ಧದಲ್ಲಿ ಲಸಿಕೆಗಳನ್ನು ಪಡೆಯುತ್ತವೆ. ಲಸಿಕೆಗಳ ಮೊದಲ ಸರಬರಾಜು 2021ರ ಮೊದಲ ತ್ರೈಮಾಸಿಕದಲ್ಲಿ ಆರಂಭಗೊಳ್ಳುತ್ತದೆ’’ ಎಂದು ಡಬ್ಲುಎಚ್‌ಒ, ಗವಿ ಮತ್ತು ಸಿಇಪಿಐ ಹೇಳಿಕೆಯೊಂದರಲ್ಲಿ ತಿಳಿಸಿವೆ.