ಹತ್ರಸ್ ಪ್ರಕರಣ: ವೈದ್ಯಕೀಯ ಪರೀಕ್ಷೆಗೆ ತಡಮಾಡಿದ್ದೇ ಸಾಕ್ಷ್ಯನಾಶಕ್ಕೆ ಕಾರಣ; ಸಿಬಿಐ

Update: 2020-12-20 18:29 GMT

ಲಕ್ನೊ, ಡಿ.20: ಹತ್ರಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಪಟ್ಟಿ ದಾಖಲಿಸಿರುವ ಸಿಬಿಐ, ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲು ವಿಳಂಬಿಸಿರುವುದು ಪ್ರಮುಖ ಸಾಕ್ಷ್ಯ ನಾಶಕ್ಕೆ ಕಾರಣವಾಗಿದೆ ಎಂದು ಉಲ್ಲೇಖಿಸಿರುವುದಾಗಿ ವರದಿಯಾಗಿದೆ.

 ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆಯ ಕುಟುಂಬದವರು ಚಂದಪ್ಪ ಪೊಲೀಸ್ ಠಾಣೆಯ ಪೊಲೀಸರಿಗೆ ದೂರು ನೀಡಿದಾಗ ಅವರು ನಿಯಮವನ್ನು ಪಾಲಿಸಲಿಲ್ಲ. ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳದೆ ಮತ್ತು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಳ್ಳದೆ ಕರ್ತವ್ಯಲೋಪ ತೋರಿದ್ದಾರೆ ಎಂದು ಸಿಬಿಐ ಹೇಳಿದೆ.

  ಸಂತ್ರಸ್ತ ಯುವತಿಯ ಆರೋಗ್ಯಸ್ಥಿತಿ ವಿಷಮಿಸಿದ್ದಾಗ ಸೆಪ್ಟಂಬರ್ 22ರಂದು ನೀಡಿರುವ ಹೇಳಿಕೆಯಲ್ಲಿ ಊರಿನ ನಾಲ್ವರು ಯುವಕರ ಹೆಸರನ್ನು ಹೇಳಿದ್ದಳು. ಈ ಹೇಳಿಕೆಯನ್ನು ಮರಣ ಕಾಲದ ಹೇಳಿಕೆ ಎಂದು ಪರಿಗಣಿಸಿದ ಸಿಬಿಐ ಆರೋಪಪಟ್ಟಿ ದಾಖಲಿಸಿದೆ. ಪ್ರಕರಣದಲ್ಲಿ ಪೊಲೀಸರ ಕರ್ತವ್ಯಲೋಪದ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು, ಸರಕಾರಕ್ಕೆ ಮಾಹಿತಿ ದೊರಕಿದ ತಕ್ಷಣ ಚಂದಪ್ಪ ಠಾಣೆಯ ಅಧಿಕಾರಿ ಸೇರಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಸಂತ್ರಸ್ತ ಯುವತಿ ಹೆಸರಿಸಿದ್ದ ನಾಲ್ವರು ಆರೋಪಿಗಳನ್ನೂ ಬಂಧಿಸಲಾಗಿದೆ. ಸಂತ್ರಸ್ತೆಯ ಕುಟುಂಬದವರು ಒತ್ತಾಯಿಸದಿದ್ದರೂ ಸರಕಾರವೇ ಸಿಬಿಐ ತನಿಖೆಗೆ ಸೂಚಿಸಿದೆ ಎಂದು ಹೇಳಿದ್ದಾರೆ.

 ಆರೋಪಿಗಳಲ್ಲಿ ಒಬ್ಬನಾದ ಸಂದೀಪ್ ತನ್ನ ಕತ್ತು ಹಿಸುಕಲು ಪ್ರಯತ್ನಿಸಿದ್ದ ಮತ್ತು ತನಗೆ ಕಿರುಕುಳ ನೀಡಿದ್ದ ಎಂದು ಸಂತ್ರಸ್ತೆ ಹೇಳಿರುವುದಾಗಿ ಸಂತ್ರಸ್ತೆಯ ಸಹೋದರ ದಾಖಲಿಸಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಚಂದಪ್ಪ ಪೊಲೀಸ್ ಠಾಣೆಯಲ್ಲಿ ಯಾವುದೇ ಮಹಿಳಾ ಅಧಿಕಾರಿ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಬಗ್ಗೆ ಗಮನ ನೀಡಿಲ್ಲ. ತನ್ನನ್ನು ಯುವಕರು ಪೀಡಿಸಿದ್ದರು ಎಂದು ಸೆಪ್ಟಂಬರ್ 19ರಂದು ಸಂತ್ರಸ್ತೆ ಹೇಳಿಕೆ ನೀಡಿದಾಗಲೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಸೆಪ್ಟಂಬರ್ 22ರಂದು ಸಂತ್ರಸ್ತೆಯ ಆರೋಗ್ಯಸ್ಥಿತಿ ವಿಷಮಿಸಿ ಆಲಿಗಢ ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಆರೋಪಿಗಳು ತನ್ನ ಮೇಲೆ ಬಲಾತ್ಕಾರ ಎಸಗಿರುವುದಾಗಿ ಸ್ಪಷ್ಟವಾಗಿ ಹೇಳಿದ ಬಳಿಕವಷ್ಟೇ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಪ್ರಕರಣದ ನಿರ್ವಹಣೆ ಸಂದರ್ಭ ಪೊಲೀಸರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯಲೋಪವು ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಪ್ರಕ್ರಿಯೆಯ ವಿಳಂಬಕ್ಕೆ ನೇರ ಕಾರಣವಾಗಿದೆ. ಸಕಾಲಿಕ, ವ್ಯವಸ್ಥಿತ ಮಾದರಿಯಲ್ಲಿ ಮಹತ್ವದ ಸಾಕ್ಷಿಗಳನ್ನು ಸಂಗ್ರಹಿಸಲು ಇದು ಅಡ್ಡಿಯಾಗಿದೆ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

     ಪ್ರಮುಖ ಆರೋಪಿ ಸಂದೀಪ್ ಮತ್ತು ಸಂತ್ರಸ್ತ ಯುವತಿ ಮಧ್ಯೆ ಸ್ನೇಹವಿತ್ತು ಮತ್ತು ಇದು ಕ್ರಮೇಣ ಪ್ರೀತಿಗೆ ಬದಲಾಗಿತ್ತು. ಬಳಿಕ ಇದು ಯುವತಿಯ ಮನೆಯವರ ಗಮನಕ್ಕೆ ಬಂದ ಕಾರಣ ಯುವತಿ ಸಂದೀಪ್‌ನ ಸಂಪರ್ಕ ಕಡಿದುಕೊಂಡಿದ್ದಳು. ಆದರೂ ಸಂದೀಪ್ ಫೋನ್ ಕರೆ ಮಾಡುವುದನ್ನು ಮುಂದುವರಿಸಿದ್ದರಿಂದ ಯುವತಿಯ ಮನೆಯವರು ಗ್ರಾಮಪಂಚಾಯತ್‌ಗೆ ದೂರು ನೀಡಿದ್ದರು . 2019ರ ಅಕ್ಟೋಬರ್ 17ರಿಂದ 2020ರ ಮಾರ್ಚ್ 3ರ ಅವಧಿಯಲ್ಲಿ ಸಂದೀಪ್ ಹಾಗೂ ಸಂತ್ರಸ್ತೆಯ ಕುಟುಂಬದವರ ಮಧ್ಯೆ ಸುಮಾರು 105 ಮೊಬೈಲ್ ಕರೆಗಳ ವಿನಿಮಯವಾಗಿದೆ. ಇವರಿಬ್ಬರ ಸ್ನೇಹ ಸಂಬಂಧಕ್ಕೆ ಇನ್ನೂ ಹಲವು ಸಾಕ್ಷಿಗಳು ದೊರಕಿವೆ. ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News