ಲಕ್ಷದ್ವೀಪದಲ್ಲಿ ಇದುವರೆಗೂ ಒಂದೇ ಒಂದು ಕೊರೋನ ಪ್ರಕರಣ ದಾಖಲಾಗಿಲ್ಲ: ಕಾರಣವೇನು ಗೊತ್ತೇ?

Update: 2020-12-20 09:58 GMT
photo: atul loke 

ಕೊಚ್ಚಿ,ಡಿ.20: ಭಾರತದಲ್ಲಿ ಕೊರೋನ ವೈರಸ್ ಪ್ರಕರಣವು ಒಂದು ಕೋಟಿ ದಾಟಿ ಮುಂದೆ ಸಾಗುತ್ತಲೇ ಇದೆ. 1,45,000 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆದರೆ ಅಚ್ಚರಿಯೆಂಬಂತೆ ಭಾರತ ದೇಶದ ಭಾಗವಾಗಿರುವ ಲಕ್ಷದ್ವೀಪದಲ್ಲಿ ಇದುವರೆಗೂ ಒಂದೇ ಒಂದು ಕೊರೋನ ವೈರಸ್ ಪ್ರಕರಣ ದಾಖಲಾಗಿಲ್ಲ. ಇಂದಿಗೂ ಅಲ್ಲಿನ ಜನಜೀವನವು ಸಹಜವಾಗಿಯೇ ಇದೆ ಎಂದು timesofindia.com ವರದಿ ಮಾಡಿದೆ.

ಲಕ್ಷದ್ವೀಪ ಪ್ರದೇಶಗಲ್ಲಿ ಮಾಸ್ಕ್ ಹಾಕುವಂತೆ, ಸಾಮಾಜಿಕ ಅಂತರ ಪಾಲಿಸುವಂತೆ ಯಾವುದೇ ಕಟ್ಟಾಜ್ಞೆಗಳಿಲ್ಲ. ಅಲ್ಲಿ ಮದುವೆಗಳು ವಿಜೃಂಭಣೆಯಿಂದ ನೆರವೇರುತ್ತದೆ. ಅಂತ್ಯಸಂಸ್ಕಾರಕ್ಕೆ ಜನಸಾಗರವೇ ನೆರೆಯುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲಿನ ಮಕ್ಕಳು ಯಾವುದೇ ತೊಂದರೆಯಿಲ್ಲದೇ ಶಾಲೆಗಳಿಗೆ ತೆರಳುತ್ತಿದ್ದಾರೆ. ಅಲ್ಲಿ ಕೊರೋನದ ಕುರಿತಾದಂತೆ ಕಳೆದ ಶುಕ್ರವಾರದವರೆಗೂ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ವರದಿ ತಿಳಿಸಿದೆ.

ಕೇರಳದ ಕೊಚ್ಚಿಯಿಂದ ಲಕ್ಷದ್ವೀಪಕ್ಕೆ ತೆರಳಲು ಹಡಗಿನ ವ್ಯವಸ್ಥೆಯಿದೆ. ಈ ಹಿಂದೆ ಲಕ್ಷದ್ವೀಪಕ್ಕೆ ಪ್ರವಾಸಿಗರು ತೆರಳುತ್ತಿದ್ದರು ಮತ್ತು ಪ್ರವಾಸೋದ್ಯಮವೇ ಅಲ್ಲಿನ ಪ್ರಮುಖ ಆಕರ್ಷಣೆಯಾಗಿತ್ತು. ಆದರೆ ಕೊರೋನ ವೈರಸ್ ಉಪಟಳ ಭಾರತದ ಹಲವು ಭಾಗಗಳಲ್ಲಿಪ್ರಾರಂಭವಾದ ಬಳಿಕ ಕೊಚ್ಚಿ ಮತ್ತು ಲಕ್ಷದ್ವೀಪ ನಡುವೆ ಸಂಚರಿಸಲು ಕೇವಲ ದ್ವೀಪ ನಿವಾಸಿಗಳಿಗೆ ಮಾತ್ರ ಅವಕಾಶ ನೀಡಲಾಯಿತು. ಅದೂ ಕೂಡಾ ತುರ್ತು ಅವಶ್ಯಕತೆಗಳಿಗೆ ಮಾತ್ರ.

“ನಾವು ಕೈಗೊಂಡ ಮುನ್ನೆಚ್ಚರಿಕೆ ಮತ್ತು ಸಮಯಕ್ಕೆ ಸರಿಯಾದ ಕ್ವಾರಂಟೈನ್ ವ್ಯವಸ್ಥೆಯ ಕಾರಣದಿಂದಲೇ ನಮಗೆ ಕೊರೋನದಿಂದ ಯಾವುದೇ ತೊಂದರೆಯಾಗಲಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ.

“ಸದ್ಯದ ನಿಯಮಾವಳಿಗಳ ಪ್ರಕಾರ, ಯಾರಾದರೂ ದ್ವೀಪದಿಂದ ಹೊರಗಿರುವ ಪ್ರದೇಶಗಳಿಗೆ (ಕೊಚ್ಚಿ ಅಥವಾ ಇತರ ಪ್ರದೇಶಗಳು) ತೆರಳಿದರೆ ಅವರು ದ್ವೀಪಕ್ಕೆ ವಾಪಸಾಗುವ ಮುಂಚೆ ಕೊಚ್ಚಿಯಲ್ಲಿ ಹತ್ತು ದಿನಗಳ ಕಾಲ ಕ್ವಾರಂಟೈನ್ ಗೆ ಒಳಪಡಬೇಕಾಗುತ್ತದೆ. ಏಳನೇ ದಿನದಂದು ಅವರಿಗೆ ಕೋವಿಡ್ ಟೆಸ್ಟ್ ನಡೆಸಲಾಗುತ್ತದೆ. ಈ ವೇಳೆ ನೆಗೆಟಿವ್ ಫಲಿತಾಂಶ ಬಂದರೆ ಅವರು ದ್ವೀಪಕ್ಕೆ ಆಗಮಿಸಬಹುದು. ಆಗಮಿಸಿದರೂ ಮತ್ತೆ 5 ದಿನಗಳ ಕ್ವಾರಂಟೈನ್ ಗೆ ಒಳಪಡಬೇಕಾಗುತ್ತದೆ. ಇನ್ನು ಪಾಸಿಟಿವ್ ಬಂದರೆ ಕೊಚ್ಚಿಯಲ್ಲಿಯೇ ಎಲ್ಲಾ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾದ ಬಳಿಕ ದ್ವೀಪಕ್ಕೆ ಆಗಮಿಸಲು ಅನುಮತಿ ನೀಡಲಾಗುತ್ತದೆ. ಸರಕಾರದ ವತಿಯಿಂದಲೂ ಕ್ವಾರಂಟೈನ್ ಕೇಂದ್ರಗಳಿವೆ, ಸ್ವಂತ ಖರ್ಚಿನಿಂದಲೂ ಕ್ವಾರಂಟೈನ್ ಗೆ ವ್ಯವಸ್ಥೆಗಳಿವೆ”

“ವಿಶ್ವದೆಲ್ಲೆಡೆ ಶಾಲಾ ಕಾಲೇಜುಗಳು ಮುಚ್ಚಿದ್ದು, ಮತ್ತು ಜನಜೀವನ ಅಸ್ತವ್ಯಸ್ತವಾಗಿರುವ ವೇಳೆ ಲಕ್ಷದ್ವೀಪದಲ್ಲಿ ಎಲ್ಲವೂ ಸಹಜವಾಗಿರುವುದು ಇಲ್ಲಿನ ವ್ಯವಸ್ಥೆಯ ಕುರಿತುಹೆಮ್ಮೆಪಡುವಂತೆ ಮಾಡಿದೆ ಎಂದು ಅಲ್ಲಿನ ಅಧಿಕಾರಿಯೋರ್ವರು ತಿಳಿಸಿದ್ದಾಗಿ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News