ಉದ್ಧವ್‌ಗೆ ಸೋನಿಯಾ ಪತ್ರ ಕಾಂಗ್ರೆಸ್‌ನೊಳಗೆ ಸಂವಹನ ಕೊರತೆಯ ಫಲಶ್ರುತಿ: ಎನ್‌ಸಿಪಿ

Update: 2020-12-20 17:18 GMT

ಮುಂಬೈ,ಡಿ.20: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳ ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸಿರುವ ಎನ್‌ಸಿಪಿ ಸಚಿವ ಹಾಗೂ ವಕ್ತಾರ ನವಾಬ್ ಮಲಿಕ್ ಅವರು, ಪತ್ರವು ಕಾಂಗ್ರೆಸ್ ನಾಯಕರ ನಡುವೆ ಸಂವಹನ ಕೊರತೆಯ ಫಲಶ್ರುತಿಯಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಶಿವಸೇನೆಯು ರಾಜ್ಯದ ಸಮ್ಮಿಶ್ರ ಸರಕಾರದ ಪಾಲುದಾರರ ನಡುವೆ ಎಲ್ಲವೂ ಸರಿಯಾಗಿದೆ ಎಂದು ಹೇಳಿಕೊಂಡಿದೆ.

ಶುಕ್ರವಾರ ಬರೆದ ಪತ್ರದಲ್ಲಿ ಸೋನಿಯಾ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ (ಎಂವಿಎ) ಸರಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಠಾಕ್ರೆಯವರಿಗೆ ನೆನಪಿಸಿದ್ದರು. ದಲಿತರು ಮತ್ತು ಬುಡಕಟ್ಟು ಸಮುದಾಯಗಳ ಉದ್ಧಾರಕ್ಕಾಗಿ ಕೆಲವು ನಿರ್ದಿಷ್ಟ ಕ್ರಮಗಳ ಜಾರಿಗೂ ಅವರು ಕೋರಿದ್ದರು. ಎನ್‌ಸಿಪಿ,ಕಾಂಗ್ರೆಸ್ ಮತ್ತು ಶಿವಸೇನೆ ಎಂವಿಎ ಅಂಗಪಕ್ಷಗಳಾಗಿವೆ.

ಸರಕಾರದ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳ ಜಾರಿಯಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ವ್ಯತ್ಯಯಗಳುಂಟಾ ಗಿವೆ. ಅಲ್ಲದೆ ಬುಡಕಟ್ಟು ಅಭಿವೃದ್ಧಿ ಇಲಾಖೆಯು ಕಾಂಗ್ರೆಸ್ ಸಚಿವರ ಅಧೀನದಲ್ಲಿದೆ. ವಾಸ್ತವವೇನೆಂದು ತಿಳಿದುಕೊಳ್ಳಲು ಕಾಂಗ್ರೆಸ್ ನಾಯಕರು ಸಂಬಂಧಿತ ಸಚಿವರನ್ನೇ ಕೇಳಬೇಕಿತ್ತು ಎಂದು ಮಲಿಕ್ ಹೇಳಿದರು.

ಸೋನಿಯಾ ಗಾಂಧಿಯವರು ಅಸಮಾಧಾನದಿಂದ ಪತ್ರ ಬರೆದಿದ್ದಲ್ಲ.ಅದು ಕಲ್ಯಾಣ ಕ್ರಮಗಳನ್ನು ಹೇಗೆ ಕೈಗೊಳ್ಳಬಹುದು ಎನ್ನುವುದರ ಕುರಿತು ಮಾತುಕತೆ ಪ್ರಕ್ರಿಯೆಯ ಭಾಗವಾಗಿದೆ ಅಷ್ಟೇ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ಥೋರಟ್ ಸಮಜಾಯಿಷಿ ನೀಡಿದರು.

ಕಾಂಗ್ರೆಸ್ ಒತ್ತಡದ ರಾಜಕೀಯದಲ್ಲಿ ತೊಡಗಿದೆ ಎನ್ನುವುದನ್ನು ನಿರಾಕರಿಸಿದ ಶಿವಸೇನೆ ವಕ್ತಾರ ಸಂಜಯ ರಾವುತ್ ಅವರು,ಕಾಂಗ್ರೆಸ್ ಪಕ್ಷವು ಮಹಾರಾಷ್ಟ್ರದ ಜನತೆಯ ಮತ್ತು ರಾಜ್ಯದ ಹಿತಾಸಕ್ತಿಯಲ್ಲಿ ಯಾವುದೇ ಅಜೆಂಡಾವನ್ನು ಮಂಡಿಸಿದ್ದರೆ ಅದನ್ನು ಸ್ವಾಗತಿಸಲೇಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News