ರೈತರ ಪ್ರತಿಭಟನೆಗೆ ಪಂಜಾಬ್‌ನ ನರ್ಸ್, ವೈದ್ಯರ ಬೆಂಬಲ

Update: 2020-12-20 17:32 GMT

ಹೊಸದಿಲ್ಲಿ, ಡಿ.20: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿಯ ಗಡಿಭಾಗದಲ್ಲಿ ಕಳೆದ ಸುಮಾರು 1 ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಪಂಜಾಬ್‌ನ ನರ್ಸ್‌ಗಳು ಹಾಗೂ ವೈದ್ಯರು ಬೆಂಬಲ ಘೋಷಿಸಿದ್ದು ರವಿವಾರ ಸಿಂಘು ಗಡಿಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ರೈತರ ಪ್ರತಿಭಟನೆಯನ್ನು ಬೆಂಬಲಿಸಲು ನಾವಿಲ್ಲಿಗೆ ಬಂದಿದ್ದೇವೆ. ತೀವ್ರ ಚಳಿಯಿಂದ ರೈತರು ಅಸ್ವಸ್ಥರಾದರೆ ಅವರ ಆರೈಕೆ ಮಾಡುವುದೂ ನಮ್ಮ ಉದ್ದೇಶವಾಗಿದೆ. ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂಬುದು ಪಂಜಾಬ್‌ನ ಪ್ರತಿಯೊಬ್ಬರ ಆಶಯವಾಗಿದೆ ಎಂದು ಲುಧಿಯಾನದ ಆಸ್ಪತ್ರೆಯೊಂದರ ನರ್ಸ್ ಹರ್ಷದೀಪ್ ಕೌರ್ ಹೇಳಿದ್ದಾರೆ.

ಈ ಮಧ್ಯೆ ಟ್ಯಾಟೂ ಕಲಾವಿದರ(ಹಚ್ಚೆ ಹಾಕುವವರು) ತಂಡವೊಂದು ಪ್ರತಿಭಟನೆ ನಡೆಯುತ್ತಿರುವ ಸ್ಥಳದ ಸಮೀಪ ಸ್ಟಾಲ್ ಒಂದನ್ನು ನಿರ್ಮಿಸಿದೆ. ಪಂಜಾಬ್‌ನ ನಕ್ಷೆ, ಸಿಂಹದ ತಲೆ, ರೈತರು ಕಟಾವು ಮಾಡುತ್ತಿರುವುದು, ಕೃಷಿ ಸಾಧನಗಳು ಮತ್ತು ಸಲಕರಣೆಗಳು, ಟ್ರಾಕ್ಟರ್‌ಗಳ ಹಚ್ಚೆ ಹಾಕಿಸಿಕೊಳ್ಳುವುದಕ್ಕೆ ವಿಪರೀತ ಬೇಡಿಕೆಯಿದೆ ಎಂದು ತಂಡದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News