ಬಂಗಾಳದ ಜನತೆ ಬದಲಾವಣೆಗೆ ಹಾತೊರೆಯುತ್ತಿದ್ದಾರೆ: ಅಮಿತ್ ಶಾ

Update: 2020-12-20 17:52 GMT

ಕೋಲ್ಕತಾ, ಡಿ.20: ರಾಜಕೀಯ ಹಿಂಸಾಚಾರ, ಭ್ರಷ್ಟಾಚಾರ, ಸುಲಿಗೆ, ಬಾಂಗ್ಲಾದೇಶೀಯರ ಅಕ್ರಮ ಒಳನುಸುಳುವಿಕೆಯಿಂದ ಬೇಸತ್ತಿರುವ ಪಶ್ಚಿಮ ಬಂಗಾಳದ ಜನತೆ ಬದಲಾವಣೆಗಾಗಿ ಹಾತೊರೆಯುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರವಿವಾರ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ ಶಾ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಪಶ್ಚಿಮ ಬಂಗಾಳದ ಸುವರ್ಣ ಯುಗದ ಕಾಲ ಮತ್ತೆ ಮರಳಲಿದೆ ಎಂದು ಹೇಳಿದರು.

ಬೋಲ್‌ಪುರದಲ್ಲಿ ನಡೆದ ರೋಡ್‌ ಶೋನಲ್ಲಿ ಪಾಲ್ಗೊಂಡು ಮಾತನಾಡಿದ ಶಾ, ನನ್ನ ರಾಜಕೀಯ ಬದುಕಿನಲ್ಲಿ ಹಲವಾರು ರೋಡ್‌ಶೋ ಸಂಘಟಿಸಿದ್ದೇನೆ ಮತ್ತು ಅದರಲ್ಲಿ ಪಾಲ್ಗೊಂಡಿದ್ದೇನೆ. ಆದರೆ ಇಲ್ಲಿ ನಡೆದಂತಹ ಕಾರ್ಯಕ್ರಮವನ್ನು ಇದುವರೆಗೂ ಕಂಡಿಲ್ಲ. ಇದರಲ್ಲಿ ಪಾಲ್ಗೊಂಡ ಬೃಹತ್ ಜನಸ್ತೋಮ ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧ ಇರುವ ವ್ಯಾಪಕ ಜನಾಕ್ರೋಶದ ದ್ಯೋತಕವಾಗಿದೆ. ಈ ಜನಸ್ತೋಮ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಸೂಚಿಯ ಬಗ್ಗೆ ಜನತೆಗಿರುವ ವಿಶ್ವಾಸದ ಪ್ರತೀಕವಾಗಿದೆ ಎಂದರು.

‘ಪಶ್ಚಿಮ ಬಂಗಾಳದ ಜನತೆ ಕೇವಲ ಜನನಾಯಕರ ಬದಲಾವಣೆಯನ್ನು ಮಾತ್ರ ಬಯಸುತ್ತಿಲ್ಲ. ಭ್ರಷ್ಟಾಚಾರ, ರಾಜಕೀಯ ಹಿಂಸಾಚಾರ, ಬಾಂಗ್ಲಾದೇಶೀಯರ ಒಳನುಸುಳುವಿಕೆಯಿಂದ ಮುಕ್ತರಾಗಲೂ ಹಂಬಲಿಸುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಇದು ಸಾಧ್ಯ ಎಂದವರು ಅರಿತಿದ್ದಾರೆ’ ಎಂದು ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News