ಭಾರತದ ಗಡಿಯೊಳಕ್ಕೆ ನಾಗರಿಕರ ಸೋಗಿನಲ್ಲಿ ನುಸುಳಿದ ಚೀನಿ ಸೈನಿಕರು !

Update: 2020-12-21 03:59 GMT
ಸಾಂದರ್ಭಿಕ ಚಿತ್ರ

ಶ್ರೀನಗರ : ಚೀನಾದ ಸೈನಿಕರು ನಾಗರಿಕ ವೇಷದಲ್ಲಿ ಎರಡು ವಾಹನಗಳಲ್ಲಿ ಭಾರತದ ಗಡಿಯೊಳಕ್ಕೆ ನುಸುಳಿರುವ ಆತಂಕಕಾರಿ ಘಟನೆ ವರದಿಯಾಗಿದೆ.

ನ್ಯೋಮಾ ಪ್ರದೇಶದ ಚಂಗ್‌ತಾಂಗ್ ಗ್ರಾಮಕ್ಕೆ ಎರಡು ವಾಹನಗಳಲ್ಲಿ ಆಗಮಿಸಿರುವ ಕುರಿತ ವೀಡಿಯೊವನ್ನು ನಾಗರಿಕರು ರವಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಸ್ಥಳೀಯರು ಜಾನುವಾರುಗಳನ್ನು ಮೇಯಿಸುತ್ತಿದ್ದಾಗ ನಾಗರಿಕರ ವೇಷದಲ್ಲಿದ್ದ ಚೀನಿ ಸೈನಿಕರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಸ್ಥಳೀಯ ನಿವಾಸಿಗಳು ಪ್ರಬಲ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಅವರು ಹಿಂದಕ್ಕೆ ಹೋದರು. ಸ್ಥಳೀಯರು ಈ ಬಗ್ಗೆ ಐಟಿಬಿಪಿ ಸಿಬ್ಬಂದಿಗೂ ಮಾಹಿತಿ ನೀಡಿದರು.

ಎರಡು ವಾಹನಗಳಲ್ಲಿದ್ದ ಚೀನಿ ಸೈನಿಕರು ಕೆಲ ಪ್ರಚಾರ ಸಾಮಗ್ರಿಗಳೊಂದಿಗೆ ಭಾರತ- ಚೀನಾ ಗಡಿಯಲ್ಲಿ ಭಾರತದ ಭೂಪ್ರದೇಶದೊಳಕ್ಕೆ ಪ್ರವೇಶಿಸುತ್ತಿರುವುದು ವೀಡಿಯೊದಲ್ಲಿ ಕಾಣಿಸುತ್ತಿದೆ. ಆದರೆ ಸ್ಥಳೀಯ ಗ್ರಾಮಸ್ಥರು ಪ್ರಬಲ ಪ್ರತಿಭಟನೆ ನಡೆಸಿ ಅವರನ್ನು ಹಿಂದಕ್ಕೆ ಕಳುಹಿಸುವಲ್ಲಿ ಸಫಲರಾದರು. ಈ ಹಂತದಲ್ಲಿ ಐಟಿಬಿಪಿ ಸಿಬ್ಬಂದಿ ಕೂಡಾ ಕಾರ್ಯಾಚರಣೆ ಆರಂಭಿಸಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ.

ಈ ಘಟನೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಐಟಿಬಿಪಿ ಅಧಿಕಾರಿಗಳು ನಿರಾಕರಿಸಿದ್ದಾರೆ. ಲೆಹ್ ಪ್ರದೇಶದಲ್ಲಿ ನಿಯೋಜಿತರಾಗಿರುವ ಅಧಿಕಾರಿಗಳ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆದರೆ ಚೀನಿ ಸೈನಿಕರು ಭಾರತದ ಗಡಿಯೊಳಗೆ ಪ್ರವೇಶಿಸುತ್ತಿರುವುದುದನ್ನು ಸ್ಥಳೀಯರು ಸೆರೆಹಿಡಿದಿದ್ದು, ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News