ರಾಜಧಾನಿಯಲ್ಲಿ ಮೈಕೊರೆಯುವ ಚಳಿ: 3.4 ಡಿಗ್ರಿ ಕನಿಷ್ಠ ತಾಪಮಾನ ದಾಖಲು
ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ರವಿವಾರ ಈ ಋತುವಿನ ಕನಿಷ್ಠ ಅಂದರೆ 3.4 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಿಸಿದೆ. ಸೋಮವಾರ ಸ್ವಲ್ಪಮಟ್ಟಿಗೆ ತಾಪಮಾನ ಏರಿಕೆಯಾದರೂ, ವಾರದಲ್ಲಿ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ಸಪ್ಧರ್‌ಜಂಗ್ ವೀಕ್ಷಣಾಲಯದಲ್ಲಿ ರವಿವಾರ ಕನಿಷ್ಠ ತಾಪಮಾನ 3.4 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ. ಇದು ವಾಡಿಕೆಯ ಉಷ್ಣಾಂಶಕ್ಕಿಂತ 0.5 ಡಿಗ್ರಿಯಷ್ಟು ಕಡಿಮೆ. ಗರಿಷ್ಠ ಉಷ್ಣಾಂಶ 22.4 ಡಿಗ್ರಿ ಸೆಲ್ಷಿಯಸ್ ದಾಖಲಾಗಿದೆ.
ಪಾಲಂ ವೀಕ್ಷಣಾಲಯದಲ್ಲಿ ಕನಿಷ್ಠ ತಾಪಮಾನ 6 ಡಿಗ್ರಿ ದಾಖಲಾಗಿದ್ದರೆ, ಲೋಧಿ ರಸ್ತೆ ವೀಕ್ಷಣಾಲಯದಲ್ಲಿ ಕನಿಷ್ಠ ಉಷ್ಣಾಂಶ 3.3 ಡಿಗ್ರಿ ದಾಖಲಾಗಿದೆ. ಶನಿವಾರ ಸಪ್ಧರ್‌ಜಂಗ್ ವೀಕ್ಷಣಾಲಯದಲ್ಲಿ ಕನಿಷ್ಠ ತಾಪಮಾನ 3.9 ಡಿಗ್ರಿ ಇತ್ತು.
ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಲಡಾಖ್ ಕಡೆಯಿಂದ ಬೀಸುತ್ತಿರುವ ಶೀತಗಾಳಿ, ರಾಜಧಾನಿಯ ಉಷ್ಣಾಂಶ ಇಳಿಕೆಗೆ ಪ್ರಮುಖ ಕಾರಣ ಎಂದು ಐಎಂಡಿ ಪ್ರಾದೇಶಿಕ ಹವಾಮಾನ ಮುನ್ಸೂಚನಾ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ.
ಪಶ್ಚಿಮ ಪ್ರಕ್ಷುಬ್ಧತೆ ಕಾರಣದಿಂದ ತಾಪಮಾನ ಸೋಮವಾರ ಅಲ್ಪ ಏರಿಕೆಯಾದರೂ ಮಂಗಳವಾರ ಮತ್ತೆ 3 ಡಿಗ್ರಿಗೆ ಕುಸಿಯುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.