ಉತ್ತರಪ್ರದೇಶ ಪೊಲೀಸರ ಮೇಲೆ ಸಿಎಂ ಆದಿತ್ಯನಾಥ್‌ಗೆ ನಂಬಿಕೆ ಇರಲಿಲ್ಲ: ಬಿಜೆಪಿ ನಾಯಕ
ಹೊಸದಿಲ್ಲಿ: ಹತ್ರಸ್ ಜಿಲ್ಲೆಯಲ್ಲಿ 20ರ ಹರೆಯದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ-ಹತ್ಯೆ ಪ್ರಕರಣವನ್ನು ಸರಿಯಾಗಿ ನಿಭಾಯಿಸಲು ಉತ್ತರಪ್ರದೇಶದ ಪೊಲೀಸರು ವಿಫಲರಾಗಿದ್ದರು ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ndtvಗೆ ತಿಳಿಸಿದ್ದಾರೆ. ಹತ್ರಸ್ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ನಾಲ್ವರು ಆರೋಪಿಗಳ ವಿರುದ್ದ ದೋಷಾರೋಪ ಪಟ್ಟಿ ಸಲ್ಲಿಸಿದ ಕೆಲವೇ ದಿನಗಳ ಬಳಿಕ ಬಿಜೆಪಿ ನಾಯಕ ಈ ಹೇಳಿಕೆ ನೀಡಿದ್ದಾರೆ.
ಸೆಪ್ಟಂಬರ್ 14 ರಂದು ಹತ್ರಸ್‌ನಲ್ಲಿ ಮೇಲ್ಜಾತಿಗೆ ಸೇರಿದವರೆನ್ನಲಾದ ನಾಲ್ವರು 20ರ ಹರೆಯದ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸಿಬಿಐ ಚಾರ್ಚ್‌ಶೀಟ್‌ನಲ್ಲಿ ತಿಳಿಸಿದೆ. ಗಂಭೀರ ಗಾಯಗೊಂಡಿದ್ದ ಯುವತಿಯನ್ನು ದಿಲ್ಲಿಯ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಸೆಪ್ಟಂಬರ್ 30 ರಂದು ಉತ್ತರಪ್ರದೇಶ ಪೊಲೀಸರು ಯುವತಿಯ ಗ್ರಾಮದಲ್ಲಿ ರಾತೋರಾತ್ರಿ ಅಂತ್ಯಕ್ರಿಯೆ ನಡೆಸಿದ್ದರು. ಈ ಘಟನೆಯು ಇಡೀ ದೇಶದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಉತ್ತರಪ್ರದೇಶದ ಪೊಲೀಸರ ವರ್ತನೆಯು ಟೀಕೆಗೆ ಗುರಿಯಾಗಿತ್ತು.
"ಉತ್ತರಪ್ರದೇಶ ಸರಕಾರ ಯಾವಾಗಲೂ ಸಂತ್ರಸ್ತ ಕುಟುಂಬದ ಜೊತೆಗೆ ನಿಲ್ಲುತ್ತದೆ. ಸಿಬಿಐ ಈ ಪ್ರಕರಣವನ್ನು ತನಿಖೆ ನಡೆಸಬೇಕೆಂದು ಸಿಎಂ ಆದಿತ್ಯನಾಥ್ ನಿರ್ಧರಿಸಿದ್ದರು. ಅವರಿಗೆ ರಾಜ್ಯ ಪೊಲೀಸರು ಕೇಸನ್ನು ಚೆನ್ನಾಗಿ ನಿಭಾಯಿಸಬಲ್ಲರೆಂಬ ವಿಚಾರದಲ್ಲಿ ನಂಬಿಕೆ ಇರಲಿಲ್ಲ. ಎಲ್ಲ ಪೊಲೀಸ್ ಅಧಿಕಾರಿಗಳು ಉತ್ತಮವಾಗಿರುವುದಿಲ್ಲ'' ಎಂದು ಉತ್ತರಪ್ರದೇಶದ ಕಾರ್ಮಿಕ ಸಚಿವ ಸುನೀಲ್ ಭರಾಲಾ ndtvಗೆ ತಿಳಿಸಿದ್ದಾರೆ.