ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕೆ ದಾಟಿದರೆ...: ಪ್ರಶಾಂತ್ ಕಿಶೋರ್ ಸವಾಲು

Update: 2020-12-21 06:59 GMT

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭಾರೀ ಪ್ರಚಾರದಲ್ಲಿ ತೊಡಗಿರುವ ನಡುವೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್, ಬಿಜೆಪಿ ಮುಂಬರುವ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಸೀಟು ಗಳಿಕೆಯಲ್ಲಿ ಎರಡಂಕೆ ದಾಟಲು ಕಷ್ಟಪಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕೆಲವು ಮಾಧ್ಯಮಗಳು ಬಿಜೆಪಿಗೆ ವಿಪರೀತ ಪ್ರಚಾರ ನೀಡುತ್ತಿವೆ. ವಾಸ್ತವವಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕೆಯ ಗೆಲ್ಲುವುದು ಕಷ್ಟವಿದೆ. ನೀವು ಈ ಟ್ವೀಟನ್ನು ಅಳಿಸದೇ ಉಳಿಸಿಕೊಂಡಿರಿ. ಬಿಜೆಪಿ ಏನಾದರೂ ಉತ್ತಮ ಸಾಧನೆ ಮಾಡಿದರೆ ನಾನು ಟ್ಟಿಟರ್‌ ತ್ಯಜಿಸುತ್ತೇನೆ ಎಂದು ಕಿಶೋರ್ ಸವಾಲು ಹಾಕಿದರು.

ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಲು ಅವಕಾಶ ನೀಡಿ ಎಂದು ವಿನಂತಿಸಿಕೊಂಡಿರುವ ಗೃಹ ಸಚಿವ ಅಮಿತ್ ಶಾ, ಬಿಜೆಪಿಯು ರಾಜ್ಯದ 294 ಸದಸ್ಯ ಬಲದ ವಿಧಾನಸಭೆಯಲ್ಲಿ 200ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಏರಲಿದೆ ಎಂದು  ಭರವಸೆ ವ್ಯಕ್ತಪಡಿಸಿದ್ದರು. ಶಾ ಹೇಳಿಕೆಯ ಹಿನ್ನೆಲೆಯಲ್ಲಿ ಕಿಶೋರ್ ಬಿಜೆಪಿಗೆ ಟ್ವಿಟರ್‌ನಲ್ಲಿ ನೀವು ಎರಡಂಕೆ ಸ್ಥಾನ ದಾಟುವುದು ಕಷ್ಟವಿದೆ ಎಂದು ತಿರುಗೇಟು ನೀಡಿದ್ದಾರೆ.

ಶನಿವಾರ ಹಾಗೂ ರವಿವಾರ ಎರಡು ದಿನ ಪಶ್ಚಿಮ ಬಂಗಾಳದ ಪ್ರವಾಸದಲ್ಲಿ ರ್ಯಾಲಿ ಹಾಗೂ ರೋಡ್ ಶೋ ನಡೆಸಿರುವ ಶಾ ತೃಣಮೂಲ ಕಾಂಗ್ರೆಸ್‌ನ ಪ್ರಭಾವಿ ನಾಯಕ ಸುವೇಂಧು ಅಧಿಕಾರಿ ಸಹಿತ ಹಲವು ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರು.

2021ರ ಚುನಾವಣೆಯಲ್ಲಿ ಬಿಜೆಪಿಗೆ ಸ್ವಲ್ಪವೂ ಅವಕಾಶವನ್ನು ನೀಡದಿರಲು ಮಮತಾ ಬ್ಯಾನರ್ಜಿ ಅವರು 600ಕ್ಕೂ ಅಧಿಕ ರ್ಯಾಲಿ ಹಾಗೂ ಸಭೆಗಳನ್ನು ನಡೆಸಲು ನಿರ್ಧರಿಸಿದ್ದಾರೆ. ಜನವರಿಯಲ್ಲಿ ಬಿಜೆಪಿ ವಿರೋಧಿ ನಾಯಕರೊಂದಿಗೆ ಕೋಲ್ಕತಾದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ರ್ಯಾಲಿಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್, ಎನ್‌ಸಿಪಿ ಮುಖಂಡ ಶರದ್ ಪವಾರ್ ಹಾಗೂ ಇತರ ಸ್ಥಳೀಯ ನಾಯಕರನ್ನು ಆಹ್ವಾನಿಸಲು ಬಯಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News