ಜಾಮೀನು ಆದೇಶದಲ್ಲಿ ಪೂರ್ಣ ಹೆಸರಿಲ್ಲವೆಂದು ಎಂಟು ತಿಂಗಳು ಜೈಲಿನಲ್ಲಿಯೇ ಉಳಿದ ವ್ಯಕ್ತಿ!

Update: 2020-12-21 07:27 GMT

ಅಲಹಾಬಾದ್ : ಜಾಮೀನು ಆದೇಶದಲ್ಲಿ ಮಧ್ಯದ ಹೆಸರು -ಕುಮಾರ್- ಇರಲಿಲ್ಲ ಎಂಬ ಒಂದೇ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ಎಂಟು ತಿಂಗಳುಗಳ ಕಾಲ ಅಕ್ರಮವಾಗಿ ಬಂಧನದಲ್ಲಿರಿಸಿದ ಸಿದ್ಧಾರ್ಥನಗರ ಜಿಲ್ಲೆಯ ಕಾರಾಗೃಹದ ಅಧೀಕ್ಷಕ ರಾಕೇಶ್ ಸಿಂಗ್ ಗೆ ಅಲಹಾಬಾದ್ ಹೈಕೋರ್ಟ್ ಎಚ್ಚರಿಕೆ ನೀಡಿದೆ. 

ಮುಂದೆ ಈ ರೀತಿಯ ತಪ್ಪುಗಳಾಗದಂತೆ ನೋಡಿಕೊಳ್ಳುವಂತೆಯೂ ಅಧಿಕಾರಿಗೆ ಸೂಚಿಸಲಾಗಿದೆ.  ಜಾಮೀನು ಅರ್ಜಿ ಸಲ್ಲಿಸಿದಾತನನ್ನು ಡಿಸೆಂಬರ್ 8, 2020ರಂದು ಬಿಡುಗಡೆಗೊಳಿಸಲಾಗಿದೆ ಎಂದು ಮಾಹಿತಿ ನೀಡುವ ಅಫಿಡವಿಟ್ ಅನ್ನು ಹೈಕೋರ್ಟ್ ಮುಂದೆ ಹಾಜರಾಗಿ ಸಿಂಗ್ ಸಲ್ಲಿಸಿದಾಗ ಮೇಲಿನ ಎಚ್ಚರಿಕೆ ನೀಡಲಾಗಿದೆ.

ಜಾಮೀನು ಆದೇಶದಲ್ಲಿ ಅರ್ಜಿದಾರನ ಹೆಸರನ್ನು ವಿನೋದ್ ಬರುವಾರ್ ಎಂದು ಬರೆಯಲಾಗಿತ್ತು. ಆದರೆ ರಿಮಾಂಡ್ ಶೀಟ್‍ನಲ್ಲಿ ಆತನ ಹೆಸರು ವಿನೋದ್ ಕುಮಾರ್ ಬರುವಾರ್ ಎಂದಾಗಿತ್ತು ಎಂಬ ಒಂದೇ ಕಾರಣಕ್ಕೆ ಆತನಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದ್ದ ಹೊರತಾಗಿಯೂ ಬಿಡುಗಡೆಗೊಳಿಸಲಾಗಿರಲಿಲ್ಲ. ಸಿದ್ಧಾರ್ಥನಗರದ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ ಸೆಪ್ಟೆಂಬರ್ 4, 2019ರಲ್ಲಿ ಆತನ ಜಾಮೀನು ಅರ್ಜಿ ತಿರಸ್ಕರಿಸಿದ ನಂತರ ಆತ ಹೈಕೋರ್ಟಿಗೆ ಅಪೀಲು ಸಲ್ಲಿಸಿದ್ದ.

ಅಪೀಲುದಾರ ತನ್ನ ಹೆಸರು ನಮೂದಿಸುವಲ್ಲಿ ಆಗಿರುವ ತಪ್ಪನ್ನು ಸರಿಪಡಿಸುವಂತೆ ಅರ್ಜಿ ಸಲ್ಲಿಸಿದ್ದರಿಂದ ಈ ಪ್ರಮಾದ ನ್ಯಾಯಾಲಯದ ಗಮನಕ್ಕೆ ಬಂದು ಒಂದು ಸಣ್ಣ ತಾಂತ್ರಿಕ ಕಾರಣಕ್ಕೆ ಈ ರೀತಿ ಆತನನ್ನು ಜೈಲಿನಲ್ಲಿರಿಸಿರುವುದಕ್ಕೆ ಬಲವಾದ ಆಕ್ಷೇಪ ಸೂಚಿಸಿತ್ತಲ್ಲದೆ ಆತನ ತಕ್ಷಣ ಬಿಡುಗಡೆಗೆ ಆದೇಶಿಸಿತ್ತು.

ಡ್ರಗ್ಸ್ ಹೊಂದಿದ್ದ ಎಂಬ ಕಾರಣಕ್ಕೆ ನಾರ್ಕಾಟಿಕ್ಸ್ ಕಾಯಿದೆಯನ್ವಯ ಹಾಗೂ ಕಳ್ಳತನಗೈದ ವಸ್ತುಗಳನ್ನು ಹೊಂದಿದ್ದ ಎಂಬ ಕಾರಣಕ್ಕೆ ಐಪಿಸಿಯ ಸೆಕ್ಷನ್ 411 ಹಾಗೂ 413 ಅನ್ವಯ ವಿನೋದ್ ಪ್ರಕರಣ ಎದುರಿಸುತ್ತಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News