×
Ad

ಬಿಜೆಪಿ ಸಂಸದನ ಪತ್ನಿ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆ

Update: 2020-12-21 14:31 IST

ಕೋಲ್ಕತಾ:ಬಿಜೆಪಿ ಸಂಸದನ ಪತ್ನಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಟಿಎಂಸಿಯ ಹಲವು ನಾಯಕರು ಬಿಜೆಪಿಗೆ ಪಕ್ಷಾಂತರವಾಗಿದ್ದಾರೆ. ಮುಂಬರುವ ರಾಜ್ಯ ಚುನಾವಣೆಯ ಹಿನ್ನೆಲೆಯಲ್ಲಿ ಬಂಗಾಳದಲ್ಲಿ ಪಕ್ಷಾಂತರ ಚಟುವಟಿಕೆ ಜೋರಾಗಿ ನಡೆಯುತ್ತಿದೆ.

ಬಂಗಾಳದ ಬಿಷ್ಣುಪುರ ಲೋಕಸಭಾ ಕ್ಷೇತ್ರದ ಸಂಸದ ಸೌಮಿತ್ರಖಾನ್ ಅವರ ಪತ್ನಿ ಸುಜಾತಾ ಮಂಡಲ್ ಖಾನ್ ಇಂದು ಟಿಎಂಸಿಗೆ ಸೇರಿದ್ದಾರೆ. ಸೌಮಿತ್ರ ಖಾನ್ ಬಿಜೆಪಿಗೆ ಸೇರುವ ಮೊದಲು ಟಿಎಂಸಿಯಲ್ಲಿದ್ದರು.

 2019ರ ಲೋಕಸಭಾ ಚುನಾವಣೆಯಲ್ಲಿ ಕ್ರಿಮಿನಲ್ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಸೌಮಿತ್ರ ಖಾನ್‌ಗೆ ನ್ಯಾಯಾಲಯವು ಬಿಷ್ಣುಪುರ ಕ್ಷೇತ್ರವನ್ನು ಪ್ರವೇಶಿಸದಂತೆ ತಡೆ ವಿಧಿಸಿತ್ತು. ಸೌಮಿತ್ರ ಖಾನ್ ಅನುಪಸ್ಥಿತಿಯಲ್ಲಿ ಪತ್ನಿ ಸುಜಾತಾ ಏಕಾಂಗಿಯಾಗಿ ಚುನಾವಣಾ ಪ್ರಚಾರ ನಡೆಸಿ ಪತಿ ಗೆಲುವು ಸಾಧಿಸಲು ಶ್ರಮಿಸಿದ್ದರು.

ಸುಜಾತಾ ಬಿಜೆಪಿಯ ಸದಸ್ಯೆಯಾಗಿದ್ದು, ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

"ನಾನು ಗೌರವವನ್ನು ಬಯಸುತ್ತೇನೆ. ದಕ್ಷ ಪಕ್ಷದ ನಾಯಕಿಯಾಗಲು ಬಯಸಿದ್ದೇನೆ. ನನ್ನ ನೆಚ್ಚಿನ ದೀದಿಯ ಜೊತೆಗೆ ಕೆಲಸ ಮಾಡಲು ಇಷ್ಟಪಡುತ್ತೇನೆ'' ಎಂದು ಮಾಜಿ ಶಿಕ್ಷಕಿ ಸುದ್ದಿಗಾರರಿಗೆ ಇಂದು ತಿಳಿಇದ್ದಾರೆ.

ಶನಿವಾರ ತೃಣಮೂಲ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿತ್ತು. ಶಾಸಕರು ಹಾಗೂ ಸಂಸದರು ಸಹಿತ 35 ಟಿಎಂಸಿ ನಾಯಕರು ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಪಕ್ಷಾಂತರವಾಗಿದ್ದರು. ಬಂಗಾಳ ಚುನಾವಣೆಗೆ 4 ತಿಂಗಳು ಬಾಕಿ ಇರುವಾಗ ಟಿಎಂಸಿ ಪಕ್ಷ ಬಿಜೆಪಿಯಿಂದ ಕಠಿಣ ಸವಾಲು ಎದುರಿಸುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News