ಕೋವಿಡ್ ಲಸಿಕೆ ಕಾರ್ಯಕ್ರಮ ಆರಂಭಗೊಂಡ ನಂತರ ಪೌರತ್ವ ಕಾಯಿದೆ ನಿಯಮಾವಳಿ ಕುರಿತು ನಿರ್ಧಾರ: ಅಮಿತ್ ಶಾ
ಬೋಲ್ಪುರ್: ಕೋವಿಡ್ ಸಾಂಕ್ರಾಮಿಕದಿಂದಾಗಿ ಪೌರತ್ವ ತಿದ್ದುಪಡಿ ಕಾಯಿದೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಇನ್ನಷ್ಟೇ ರಚಿಸಬೇಕಿದ್ದರೂ ಕೋವಿಡ್ ಲಸಿಕೆ ಕಾರ್ಯಕ್ರಮ ಪ್ರಕ್ರಿಯೆ ಆರಂಭಗೊಂಡ ನಂತರ ಆ ಕುರಿತಂತೆ ಪರಿಶೀಲಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರ ಜತೆ ಸಂಚರಿಸುತ್ತಿದ್ದ ವಾಹನಗಳ ಮೇಲೆ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ದಾಳಿಯ ಕುರಿತು ಪ್ರತಿಕ್ರಿಯಿಸಿದ ಶಾ, ನಡ್ಡಾ ಅವರಿಗೆ ಭದ್ರತೆ ಒದಗಿಸುವ ಜವಾಬ್ದಾರಿ ಹೊಂದಿರುವ ರಾಜ್ಯದ ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಡೆಪ್ಯುಟೇಶನ್‍ಗೆ ಕಳುಹಿಸುವ ಅಧಿಕಾರ ಕೇಂದ್ರ ಸರಕಾರಕ್ಕಿದೆ ಎಂದು ಹೇಳಿದರಲ್ಲದೆ ಕೇಂದ್ರವನ್ನು ದೂರುವ ಮೊದಲು ನಿಯಮಗಳನ್ನು ಪರಿಶೀಲಿಸುವಂತೆ ಟಿಎಂಸಿಗೆ ಸಲಹೆ ನೀಡಿದರು.
"ಬಿಜೆಪಿ ಅಧ್ಯಕ್ಷರ ಭೇಟಿ ವೇಳೆ ನಡೆದ ದಾಳಿ ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿ ಹಾಗೂ ಇದಕ್ಕೆ ತೃಣಮೂಲ ಕಾಂಗ್ರೆಸ್ ಸಂಪೂರ್ಣ ಜವಾಬ್ದಾರಿ,'' ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳ ಸರಕಾರವು ಓಲೈಕೆ ರಾಜಕಾರಣದಲ್ಲಿ ನಂಬಿಕೆಯಿರಿಸಿರುವುದರಿಂದ ಅದಕ್ಕೆ ನುಸುಳುಕೋರರ ಸಮಸ್ಯೆ ನಿವಾರಿಸಲು ಸಾಧ್ಯವಿಲ್ಲ, ಬಿಜೆಪಿಗೆ ಮಾತ್ರ ಅದು ಸಾಧ್ಯ ಎಂದು ಶಾ ಹೇಳಿದರು.