×
Ad

‘ಲವ್ ಜಿಹಾದ್’ ಆರೋಪದ ಭೀತಿಯಲ್ಲಿ ಉ.ಪ್ರ.ದಿಂದ ದಿಲ್ಲಿಗೆ ಪಲಾಯನಗೈದ ಜೋಡಿ: ರಕ್ಷಣೆಯ ಭರವಸೆ ನೀಡಿದ ದಿಲ್ಲಿ ಸರಕಾರ

Update: 2020-12-21 16:35 IST

ಹೊಸದಿಲ್ಲಿ: ಮನೆಯವರು ಹಾಗೂ ಪೊಲೀಸರ ಕಿರುಕುಳದ ಭೀತಿಯಲ್ಲಿ ಅಂತರ್-ಧರ್ಮೀಯ ಜೋಡಿ ನವೆಂಬರ್ ಅಂತ್ಯದಲ್ಲಿ ಉತ್ತರಪ್ರದೇಶದ ಶಹಜಹಾನ್ಪುರ ದಿಂದ ದಿಲ್ಲಿಗೆ ಪಲಾಯನ ಮಾಡಿದೆ. ಜೋಡಿಗೆ ಅಗತ್ಯವಿದ್ದರೆ ಸುರಕ್ಷಿತ ಮನೆ ಹಾಗೂ ಪೊಲೀಸ್ ಭದ್ರತೆಯನ್ನು ನೀಡಲಾಗುವುದು ಎಂದು ದಿಲ್ಲಿ ಸರಕಾರವು ನ್ಯಾಯಾಲಯದಲ್ಲಿ ತಿಳಿಸಿದ ಬಳಿಕ ಅಂತರ್ಧರ್ಮೀಯ ಜೋಡಿ ವಿಶೇಷ ವಿವಾಹ ಕಾಯ್ದೆಯಡಿ ತಮ್ಮ ವಿವಾಹವನ್ನು ನೋಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಕುಟುಂಬಗಳು ಹಾಗೂ ಉತ್ತರಪ್ರದೇಶ ಪೊಲೀಸರಿಂದ ರಕ್ಷಣೆ ಕೋರಿ ಶಮೀಮ್(25 ವರ್ಷ)ಹಾಗೂ ಸಿಮ್ರಾನ್(21)ದಿಲ್ಲಿ ಹೈಕೋರ್ಟ್ ಗೆ ಡಿಸೆಂಬರ್ 16 ರಂದು ಅರ್ಜಿ ಸಲ್ಲಿಸಿದ್ದರು ಎಂದು indianexpress.com ವರದಿ ಮಾಡಿದೆ.

ಸಿಮ್ರಾನ್ ಅವರ ಪೋಷಕರು ಬೇರೊಬ್ಬರನ್ನು ವಿವಾಹವಾಗುವಂತೆ ಆಕೆಯನ್ನು ಒತ್ತಾಯಿಸುತ್ತಿದ್ದ ಕಾರಣ ಈ ಜೋಡಿ ನವೆಂಬರ್ನಲ್ಲಿ ಶಹಜಹಾನ್ಪುರದಿಂದ ಪಲಾಯನ ಮಾಡಿದ್ದರು ಎಂದು ವರದಿಯಾಗಿದೆ.

"ಹೊಸ ಕಾನೂನು (ಉತ್ತರಪ್ರದೇಶದ ಮತಾಂತರ ವಿರೋಧಿ ಸುಗ್ರೀವಾಜ್ಞೆ)ಅಂತರ್-ಧರ್ಮದ ದಂಪತಿಗಳಿಗೆ ಒಂದು ಸಮಸ್ಯೆಯಾಗಿದೆ. ನಾವು ಶಹಜಹಾನ್ಪುರವನ್ನು ತೊರೆಯಲು ಇದೂ ಒಂದು ಕಾರಣವಾಗಿದೆ. ಉತ್ತರ ಪ್ರದೇಶದಲ್ಲಿ ನಾವು ಮದುವೆಯಾಗಿದ್ದರೆ ಅವರು ಅದನ್ನು ‘ಲವ್ ಜಿಹಾದ್’ ಎಂದು ಕರೆಯುತ್ತಿದ್ದರು'' ಎಂದು ಸಿಮ್ರಾನ್ indianexpress.comಗೆ ತಿಳಿಸಿದ್ದಾರೆ.

ದಿಲ್ಲಿಗೆ ಆಗಮಿಸಿದ ಬಳಿಕ ಈ ಜೋಡಿ ಎನ್ಜಿಒವೊಂದನ್ನು ಸಂಪರ್ಕಿಸಿದ್ದು, ಕಾನೂನು ಅರ್ಜಿಯನ್ನು ಸಲ್ಲಿಸಲು ಅದು ಸಹಾಯ ಮಾಡಿದೆ. ಇಬ್ಬರೂ ಧರ್ಮಗಳನ್ನು ಬದಲಿಸದೆ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಲು ಯೋಜಿಸಿದ್ದಾಗಿ ಜೋಡಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News