ಕೇಮ್ಯಾನ್ ದ್ವೀಪದಲ್ಲಿ 350 ಮಿಲಿಯನ್ ಡಾಲರ್ ವೆಚ್ಚದ ಮೆಡಿಸಿಟಿ ನಿರ್ಮಿಸಲಿರುವ ಆ್ಯಸ್ಟರ್ ಹೆಲ್ತ್ ಕೇರ್
ಕೇರಳ ಮೂಲದ ಖ್ಯಾತ ವೈದ್ಯ, ಉದ್ಯಮಿ ಆಝಾನ್ ಮೂಪನ್ ಅವರು ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿರುವ ದುಬೈಯ ಆ್ಯಸ್ಟರ್ ಡಿಎಂ ಹೆಲ್ತ್ ಕೇರ್ ಸಂಸ್ಥೆ ಬ್ರಿಟಿಷ್ ಸಾಗರೋತ್ತರ ಪ್ರಾಂತ್ಯವಾಗಿರುವ ಕೇಮೆನ್ ದ್ವೀಪಸಮೂಹದ ಅತ್ಯಂತ ದೊಡ್ಡ ದ್ವೀಪವಾದ ಗ್ರ್ಯಾಂಡ್ ಕೇಮ್ಯಾನ್ನಲ್ಲಿ 350 ಮಿಲಿಯನ್ ಡಾಲರ್ ವೆಚ್ಚದ 500 ಹಾಸಿಗೆಗಳ ಅತ್ಯಾಧುನಿಕ ಸೌಲಭ್ಯಗಳಿರುವ ಆಸ್ಪತ್ರೆಯನ್ನು ಸ್ಥಾಪಿಸಲಿದೆ. ಈ ನಿಟ್ಟಿನಲ್ಲಿ ಅಲ್ಲಿ ಆ್ಯಸ್ಟರ್ ಕೇಮ್ಯಾನ್ ಮೆಡಿಸಿಟಿ ನಿರ್ಮಾಣಕ್ಕಾಗಿ ಕೇಮ್ಯಾನ್ ಐಲ್ಯಾಂಡ್ಸ್ ಸರಕಾರವು ಆ್ಯಸ್ಟರ್ ಸಂಸ್ಥೆಯ ಜತೆ ಒಪ್ಪಂದಕ್ಕೆ ಬಂದಿದೆ.
ಮುಂದಿನ ಹಲವಾರು ವರ್ಷಗಳಲ್ಲಿ ಹಂತ ಹಂತವಾಗಿ ನಿರ್ಮಾಣಗೊಳ್ಳರುವ ಈ ಅತ್ಯಾಧುನಿಕ ಮೆಡಿಸಿಟಿಯಲ್ಲಿ ಆಸ್ಪತ್ರೆಯ ಹೊರತಾಗಿ, ವೈದ್ಯಕೀಯ ವಿವಿ ಹಾಗೂ ಅಸಿಸ್ಟೆಡ್ ಲಿವಿಂಗ್ ಸೌಲಭ್ಯವೂ ಇರಲಿದೆ. ಇಲ್ಲಿ ನಿರ್ಮಾಣವಾಗಲಿರುವ ಆಸ್ಪತ್ರೆ ಸ್ಥಳೀಯರಿಗೆ ಹೊರತಾಗಿ ಮೆಡಿಕಲ್ ಟೂರಿಸ್ಟ್ ಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಿದೆ. "ಮೊದಲ ಹಂತದ ಭಾಗವಾಗಿ 150 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ. ಮುಂದಿನ ಮೂರರಿಂದ ನಾಲ್ಕು ವರ್ಷಗಳೊಗಾಗಿ ಮೊದಲ ಹಂತದ ಕಾಮಗಾರಿ ಮುಗಿದು ಆಸ್ಪತ್ರೆ ಕಾರ್ಯಾರಂಭಿಸಲಿದೆ,'' ಎಂದು ಆ್ಯಸ್ಟರ್ ಡಿಎಂ ಹೆಲ್ತ್ ಕೇರ್ ಸ್ಥಾಪಕ ಡಾ. ಆಝಾನ್ ಮೂಪನ್ ಹೇಳಿದ್ದಾರೆ.
ಅಮೆರಿಕ, ಕೆನಡಾ ಹಾಗೂ ಕೆರಿಬಿಯನ್ ದ್ವೀಪಗಳಿಂದ ಸಾಗರೋತ್ತರ ದೇಶಗಳಿಗೆ ಪ್ರತಿ ವರ್ಷ ಆರೋಗ್ಯ ಸೇವೆಗಳಿಗಾಗಿ ತೆರಳುವ 14 ಲಕ್ಷ ಮೆಡಿಕಲ್ ಟೂರಿಸ್ಟ್ ಗಳನ್ನು ದೃಷ್ಟಿಯಲ್ಲಿರಿಸಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
(ಆ್ಯಸ್ಟರ್ ಡಿಎಂ ಹೆಲ್ತ್ ಕೇರ್ ಸ್ಥಾಪಕ ಡಾ. ಆಝಾನ್ ಮೂಪನ್)
ಯೋಜನೆಯ ಎರಡನೇ ಹಂತವು ಆಸ್ಪತ್ರೆ ಕಾರ್ಯಾರಂಭಗೊಂಡ ಮೂರು ವರ್ಷಗಳ ನಂತರ ಕೈಗೆತ್ತಿಕೊಳ್ಳಲಾಗುವುದು ಹಾಗೂ ಅಸಿಸ್ಟೆಡ್ ಹಾಗೂ ಸ್ವತಂತ್ರ ಜೀವನ ನಡೆಸುವ ಸವಲತ್ತುಗಳನ್ನು ಒದಗಿಸಲಾಗುವುದು ಹಾಗೂ ಪ್ರತಿ ಕಟ್ಟಡದಲ್ಲಿ 100 ಮನೆಗಳಿರಲಿವೆ.
ಮೂರನೇ ಹಂತದಲ್ಲಿ ವೈದ್ಯಕೀಯ ವಿಶ್ವವಿದ್ಯಾಲಯ ನಿರ್ಮಾಣದ ಜತೆಗೆ ಮೊದಲ ಹಂತದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಯನ್ನು 500 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಮೊದಲ ಹಂತದ ಆಸ್ಪತ್ರೆ ಕಾರ್ಯಾರಂಭಗೊಂಡ ಏಳು ವರ್ಷಗಳ ನಂತರ ಮೂರನೇ ಹಂತದ ಕಾಮಗಾರಿ ಆರಂಭಗೊಳ್ಳಲಿದೆ.
ತಮ್ಮ ಸಂಸ್ಥೆಗೆ ಏಷ್ಯಾ ಹಾಗೂ ಮಧ್ಯಪೂರ್ವ ದೇಶಗಳ ಹೊರತಾಗಿ ಬೇರೆ ದೇಶಗಳಿಗೆ ವಿಸ್ತರಿಸುವ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ.
ಆ್ಯಸ್ಟರ್ ಮೆಡಿಸಿಟಿ ಈಗಾಗಲೇ ಕೇರಳದ ಕೊಚ್ಚಿಯಲ್ಲಿದ್ದು, ಕೇಮ್ಯಾನ್ ದ್ವೀಪದಲ್ಲಿ ನಿರ್ಮಾಣವಾಗಲಿರುವ ಮೆಡಿಸಿಟಿ ಸಂಸ್ಥೆಯ ಎರಡನೇ ಮೆಡಿಸಿಟಿಯಾಗಲಿದೆ.